ಉದಯವಾಹಿನಿ, ಬುಧಾಬಿ: ಅಚ್ಚರಿಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ವಿಮಾನ ನಿಲ್ದಾಣ ನಿರ್ವಹಣೆ ಮಾತುಕತೆಯಿಂದ ಯುಎಇ ಹಿಂದಕ್ಕೆ ಸರಿದಿದೆ. ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದಿಢೀರ್ ಒಂದೂವರೆ ಗಂಟೆ ಮಾತನಾಡಿದ ಕೆಲ ದಿನಗಳಲ್ಲಿ ಯುಎಇ ಈ ಮಹತ್ವದ ನಿರ್ಧಾರ ಪ್ರಕಟವಾಗಿದ್ದು ವಿಶೇಷ. ಈಗಾಗಲೇ ಅಫ್ಘಾನಿಸ್ತಾನದಲ್ಲಿರುವ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಣವನ್ನು ಯುಎಇ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಯುಎಇ ಕಂಪನಿ ತೆಗೆದುಕೊಳ್ಳಬಹುದು ಎಂದು ವರದಿಯಾಗಿತ್ತು.
ಯುಎಇ ಆರಂಭದಲ್ಲಿ ಆಸಕ್ತಿ ತೋರಿಸಿದ್ದರೂ ವಿಮಾನ ನಿಲ್ದಾಣದ ನಿರ್ವಹಣೆ ಮತ್ತು ಕಾರ್ಯಾಚರಣೆಗಳನ್ನು ಹೊರಗುತ್ತಿಗೆ ನೀಡಲು ಸ್ಥಳೀಯ ಪಾಲುದಾರರು ಸಿಗದ ಕಾರಣ ಹಿಂದಕ್ಕೆ ಸರಿದಿದೆ. ಈ ಬಗ್ಗೆ ಯುಎಇ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ. ಯುಎಇ ಮತ್ತು ಸೌದಿ ಅರೇಬಿಯಾ ಪಾಕಿಸ್ತಾನದ ವ್ಯಾಪಾರ ಪಾಲುದಾರರಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಸೌದಿ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದೆ. ಈ ಮಧ್ಯೆ ಯೆಮೆನ್ ವಿಚಾರದಲ್ಲಿ ಸೌದಿ ಮತ್ತು ಯುಎಎ ಮಧ್ಯೆ ಘರ್ಷಣೆ ನಡೆಯುತ್ತಿದೆ. ಹೀಗಾಗಿ ಈ ಕಾರಣಕ್ಕೆ ಮಾತುಕತೆಯಿಂದ ಹಿಂದಕ್ಕೆ ಸರಿದಿರುವ ಸಾಧ್ಯತೆಯಿದೆ.
