ಉದಯವಾಹಿನಿ, ಮೆಕ್ಸಿಕೋ ನಗರ: ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ 11 ಜನರು ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಮಧ್ಯ ಮೆಕ್ಸಿಕೋದ ಸಾಕರ್ ಮೈದಾನದಲ್ಲಿ ನಡೆದಿದೆ.ಬಂದೂಕುಧಾರಿಗಳು ಗುಂಡು ಹಾರಿಸಿ ಕನಿಷ್ಠ 11 ಜನರನ್ನು ಕೊಂದಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಬಂದೂಕುಧಾರಿಗಳು ಫುಟ್ಬಾಲ್ ಪಂದ್ಯದ ಕೊನೆಯಲ್ಲಿ ಬಂದು ಗುಂಡು ಹಾರಿಸಿದ್ದಾರೆ. 10 ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಒಬ್ಬರು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟರು. ಓರ್ವ ಮಹಿಳೆ ಮತ್ತು ಬಾಲಕ ಸೇರಿ 12 ಜನ ಗಾಯಗೊಂಡಿದ್ದಾರೆ ಎಂದು ಸಲಾಮಾಂಕಾ ಮೇಯರ್ ಸೀಸರ್ ಪ್ರಿಯೆಟೊ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ.ನಗರದಲ್ಲಿ ಅಪರಾಧ ಕೃತ್ಯಗಳ ಮುಂದುವರಿದ ಭಾಗವಾಗಿ ಈ ದಾಳಿ ಮಾಡಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಸಹಾಯ ಮಾಡುವಂತೆ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್‌ಗೆ ಮೇಯರ್ ಪ್ರಿಯೆಟೋ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಪ್ರದೇಶದಲ್ಲಿ ಭದ್ರತೆ ಬಲಪಡಿಸಲು ಮತ್ತು ಸಮನ್ವಯ ಸಾಧಿಸಲು ಫೆಡರಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಗುವಾನಾಜುವಾಟೊ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಮಾಹಿತಿ ನೀಡಿದೆ. ಕಳೆದ ವರ್ಷ ಮೆಕ್ಸಿಕೋದಲ್ಲಿ ನಡೆದ ನರಹತ್ಯೆಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಗುವಾನಾಜುವಾಟೊದಲ್ಲಿ ದಾಖಲಾಗಿವೆ.
“ದುರದೃಷ್ಟವಶಾತ್, ಅಧಿಕಾರಿಗಳನ್ನು ನಿಗ್ರಹಿಸಲು ಕ್ರಿಮಿನಲ್ ಗುಂಪುಗಳು ಪ್ರಯತ್ನಿಸುತ್ತಿವೆ. ಆದರೆ ಆ ಗುಂಪುಗಳಿಗೆ ಅದನ್ನು ಸಾಧಿಸಲು ಸಾಧ್ಯವಿಲ್ಲ” ಎಂದು ಮೇಯರ್ ಹೇಳಿದರು.
2016ರ ನಂತರ ದೇಶದಲ್ಲಿ 2025ರಲ್ಲಿ ಅತೀ ಕಡಿಮೆ ಕೊಲೆ ಪ್ರಕರಣಗಳು ನಡೆದಿವೆ. ಪ್ರತಿ 1,00,000 ನಿವಾಸಿಗಳಿಗೆ 17.5 ಕೊಲೆಗಳು ಸಂಭವಿಸಿವೆ. ಆದರೂ ಈ ಸಂಖ್ಯೆಗಳು ದೇಶದ ಹಿಂಸಾಚಾರವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
