ಉದಯವಾಹಿನಿ, ವಾಷಿಂಗ್ಟನ್ : ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹಿಂದೆಂದೂ ಕಂಡು ಕೇಳರಿಯಂತಹ ಹಿಮಪಾತ ಆಗುತ್ತಿದ್ದು, ಕಡು ಚಳಿಯ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ತಾಪಮಾನದಲ್ಲಿ ತೀವ್ರ ಕುಸಿತವಾಗಿರುವುದರಿಂದ ಲಕ್ಷಾಂತರ ಮಂದಿ ವಿದ್ಯುತ್ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಿಮ ಬಿರುಗಾಳಿ ಮತ್ತು ತೀವ್ರ ಶೀತದ ಪರಿಣಾಮವಾಗಿ ಈವರೆಗೂ 30ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕವಿದೆ. ಅಮೆರಿಕದ ಸುಮಾರು ಮೂರನೇ ಎರಡು ಭಾಗ ಪ್ರದೇಶಗಳು ಈಗಾಗಲೇ ಈ ಹಿಮ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿವೆ.

ನ್ಯೂ ಇಂಗ್ಲೆಂಡ್ ಸೇರಿದಂತೆ ಪೂರ್ವ ಅಮೆರಿಕದ ಭಾಗಗಳಲ್ಲಿ ಭಾರೀ ಹಿಮಪಾತದಿಂದ ಚಳಿಗಾಲದ ಬಿರುಗಾಳಿ ಆವರಿಸಿದೆ. ಪ್ರಸ್ತುತ ಉಂಟಾಗಿರುವ ಭೀಕರ ಹಿಮ ಬಿರುಗಾಳಿಯಿಂದ ಅಮೆರಿಕದಲ್ಲಿ ಭಾರಿ ಅನಾಹುತ ಸಂಭವಿಸಿದೆ. ಇದರೊಂದಿಗೆ ಜೀವಹಾನಿಯ ಪ್ರಮಾಣವೂ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ಕಡು ಚಳಿ ಮತ್ತು ಹಿಮ ಬಿರುಗಾಳಿಯಿಂದ ದೇಶವೇ ತತ್ತರಿಸಿದೆ. ದೊಡ್ಡ ದೊಡ್ಡ ರಾಜ್ಯಗಳಲ್ಲೂ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಜನರು ಹೊರಗೆ ಹೋಗುವುದು ಅಸಾಧ್ಯವಾಗಿರುವುದಷ್ಟೇ ಅಲ್ಲ, ಮನೆಯೊಳಗೇ ಉಳಿದುಕೊಳ್ಳುವುದೂ ಕಷ್ಟವಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!