ಉದಯವಾಹಿನಿ, ನ್ಯೂಯಾರ್ಕ್: ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತ ಮುಂದಿದ್ದು, ಹೆಚ್ಚು ಲಾಭ ಪಡೆಯಲಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪರವಾಗಿ ಮೊದಲ ಪ್ರತಿಕ್ರಿಯೆ ನೀಡಿದರು.
‘ಮದರ್ ಆಫ್ ಆಲ್ ಟ್ರೇಡ್’ ಎಂದು ಕರೆಯಲ್ಪಡುತ್ತಿರುವ ಭಾರತ-ಇಯು ವ್ಯಾಪಾರ ಒಪ್ಪಂದದ ಕುರಿತ ಮಾಧ್ಯಮಗಳ ಪ್ರಶ್ನೆಗೆ ಮಂಗಳವಾರ ಉತ್ತರಿಸಿರುವ ಗ್ರೀರ್, “ನಾನು ಇಲ್ಲಿಯವರೆಗೆ ಒಪ್ಪಂದದ ಕೆಲವು ವಿವರಗಳನ್ನು ನೋಡಿದ್ದೇನೆ. ಭಾರತವು ಇದರಲ್ಲಿ ಮುಂಚೂಣಿಯಲ್ಲಿದೆ ಎಂಬುದು ನನ್ನ ಭಾವನೆ. ಯುರೋಪ್ನ ಮಾರುಕಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸಲಿದ್ದಾರೆ” ಎಂದರು.
“ಭಾರತ ಕೆಲವು ಹೆಚ್ಚುವರಿ ವಲಸೆ ಹಕ್ಕುಗಳನ್ನು ಹೊಂದಿರುವಂತೆ ತೋರುತ್ತಿದೆ. ಅಮೆರಿಕದಲ್ಲಿ ಜಾಗತೀಕರಣದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಟ್ರಂಪ್ ಸರ್ಕಾರ ಪ್ರಯತ್ನಿಸುತ್ತಿರುವಾಗ ಯುರೋಪ್ ಒಕ್ಕೂಟ ಜಾಗತೀಕರಣವನ್ನು ವಿಸ್ತರಿಸುತ್ತಿದೆ” ಎಂದು ಹೇಳಿದರು.
ಅಮೆರಿಕದ ಸುಂಕದಿಂದ ಇತರ ದೇಶಗಳ ಮಧ್ಯೆ ಒಪ್ಪಂದ: “ಭಾರತ-ಇಯು ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್ ಅಭಿಪ್ರಾಯವೇನು ಎಂಬ ಪ್ರಶ್ನೆಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶೀಯ ಉತ್ಪಾದನೆಗೆ ಆದ್ಯತೆ ನೀಡಿದ್ದಾರೆ. ಯುಎಸ್ ಮಾರುಕಟ್ಟೆ ಪ್ರವೇಶಿಸಲು ಇತರ ದೇಶಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ಇದರಿಂದ, ಕೆಲ ದೇಶಗಳು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಇತರ ದೇಶಗಳ ಮಾರುಕಟ್ಟೆಗಳನ್ನು ಹುಡುಕುತ್ತಿವೆ ಅಷ್ಟೇ” ಎಂದರು.
“ಯುರೋಪಿಯನ್ ಒಕ್ಕೂಟ ವ್ಯಾಪಾರ ಅವಲಂಬಿತವಾಗಿದೆ. ಹೀಗಾಗಿ, ಅದು ಭಾರತದ ಜೊತೆ ಒಪ್ಪಂದ ಮಾಡಿಕೊಂಡಿದೆ. ಅದರ ಉತ್ಪನ್ನಗಳನ್ನು ಅಮೆರಿಕಕ್ಕೆ ಕಳುಹಿಸಲು ಸಾಧ್ಯವಾಗದಿರುವ ಕಾರಣ, ಇತರ ದೇಶಗಳ ಮಾರುಕಟ್ಟೆ ಪ್ರವೇಶಿಸುತ್ತಿದೆ” ಎಂದು ಗ್ರೀರ್ ಅಭಿಪ್ರಾಯಪಟ್ಟರು.
“ರಷ್ಯಾದಿಂದ ತೈಲ ಖರೀದಿಗೆ ಪ್ರತಿಯಾಗಿ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಿರುವ ಬಗ್ಗೆ ಮಾತನಾಡಿರುವ ಗ್ರೀರ್, ಟ್ರಂಪ್ ಸರ್ಕಾರ ಭಾರತದ ರಫ್ತಿನ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದೆ. ಇದರ ಜೊತೆಗೆ, ರಷ್ಯಾ ತೈಲ ಸುಂಕ ಪಾವತಿಸುತ್ತಿದೆ. ರಷ್ಯಾ ಭಾರತಕ್ಕೆ ಹತ್ತಿರವಾದ ಕಾರಣ, ಅದು ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿದೆ” ಎಂದು ಹೇಳಿದರು.
