ಉದಯವಾಹಿನಿ, ವಾಷಿಂಗ್ಟನ್: ಭಾರತಕ್ಕೆ ಗಣರಾಜ್ಯೋತ್ಸವದ ಶುಭ ಹಾರೈಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದೊಂದಿಗೆ ಭಾರತದ ಸುದೀರ್ಘ ಸಂಬಂಧಗಳಿಗಾಗಿ ಅಭಿನಂದನೆ ಸಲ್ಲಿಸಿದರು. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಅಮೆರಿಕ ಐತಿಹಾಸಿಕ ಬಾಂಧವ್ಯವನ್ನು ಹಂಚಿಕೊಂಡಿವೆ ಎಂದ ಅವರು, ಭಾರತವು ಸೋಮವಾರ ತನ್ನ 77ನೇ ಗಣರಾಜ್ಯೋತ್ಸವವನ್ನು ಆಚರಿಸಿತು. 1950ರಲ್ಲಿ ಈ ದಿನ ದೇಶದಲ್ಲಿ ಸಂವಿಧಾನ ಜಾರಿಗೆ ತಂದು ಭಾರತವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನಾಗಿ ರೂಪಿಸಿತು ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಸೋಮವಾರ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಡೊನಾಲ್ಡ್ ಟ್ರಂಪ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದರಲ್ಲಿ ಟ್ರಂಪ್ ಅವರು, 77 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಭಾರತಕ್ಕೆ ನಾನು, ನನ್ನ ಸರ್ಕಾರ, ಯುನೈಟೆಡ್ ಸ್ಟೇಟ್ಸ್ ಜನರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವು ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಐತಿಹಾಸಿಕ ಬಾಂಧವ್ಯವನ್ನು ಹಂಚಿಕೊಂಡಿವೆ ಎಂದು ಹೇಳಿದ್ದಾರೆ.
ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರು ಕೂಡ ಸೋಮವಾರ ಭಾರತದ 77 ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಹಾರೈಸಿದರು. ಮೊದಲ ಬಾರಿಗೆ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲು ತಮಗೆ ಗೌರವ ಸಿಕ್ಕಿದೆ ಮತ್ತು ಭಾರತದ ಆಕಾಶದಲ್ಲಿ ಹಾರುತ್ತಿರುವ ಅಮೆರಿಕ ನಿರ್ಮಿತ ವಿಮಾನದ ದೃಶ್ಯವು ಬೆಳೆಯುತ್ತಿರುವ ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆಯ ಪ್ರಬಲ ಸಂಕೇತವಾಗಿದೆ ಎಂದು ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿದ್ದಾರೆ.
