ಉದಯವಾಹಿನಿ, ಢಾಕಾ(ಬಾಂಗ್ಲಾದೇಶ): ರಾಜಕೀಯ ಅರಾಜಕತೆ ಎದುರಿಸುತ್ತಿರುವ ಬಾಂಗ್ಲಾದೇಶದಲ್ಲಿ ಫೆಬ್ರವರಿ 12ರಂದು ಸಾರ್ವತ್ರಿಕ ಚುನಾವಣೆ ಘೋಷಿಸಲಾಗಿದೆ. ಆದರೆ, ಇದರಲ್ಲಿ ಗಡೀಪಾರಾಗಿರುವ ಮತ್ತು ಪದಚ್ಯುತ ನಾಯಕಿ ಶೇಖ್ ಹಸೀನಾ ಅವರ ಅವಾಮಿ ಲೀಗ್​ ಪಕ್ಷ ಸ್ಪರ್ಧಿಸುವುದನ್ನು ನಿರ್ಬಂಧಿಸಲಾಗಿದೆ.ಕಳೆದ ವರ್ಷ ನಡೆದ ದಂಗೆಯಲ್ಲಿ ಮಾಜಿ ಪ್ರಧಾನಿ ಶೇಕ್​ ಹಸೀನಾ ಅವರ ಸರ್ಕಾರ ಪತನವಾಗಿತ್ತು. ಅದಾದ ಬಳಿಕ, ನೊಬೆಲ್​ ಶಾಂತಿ ಪುರಸ್ಕೃತ ಮೊಹಮದ್​ ಯೂನುಸ್​ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಜನಾಕ್ರೋಶ ಮತ್ತು ಸಾಲು ಸಾಲು ಹತ್ಯೆಗಳನ್ನು ಕಂಡ ದೇಶ ಇದೀಗ, ಮತ್ತೊಂದು ಚುನಾವಣೆಗೆ ಸಜ್ಜಾಗಿದೆ.
ಚುನಾವಣೆಗೆ ಶೇಕ್​ ಹಸೀನಾ ವಿರೋಧ: ತಮ್ಮ ಪಕ್ಷವನ್ನು ನಿಷೇಧಿಸಿದ್ದಕ್ಕೆ ಮುಂಬರುವ ಚುನಾವಣೆಯನ್ನು ಉಚ್ಚಾಟಿತ ಮಾಜಿ ಪ್ರಧಾನಿ ಶೇಕ್​ ಹಸೀನಾ ಟೀಕಿಸಿದ್ದಾರೆ. ಸಮಗ್ರ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸದೇ ಹೋದಲ್ಲಿ, ಬಾಂಗ್ಲಾದೇಶವು ಭವಿಷ್ಯದಲ್ಲಿ ದೀರ್ಘಕಾಲ ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.ಮೊಹಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು, ಅವಾಮಿ ಲೀಗ್ ಪಕ್ಷವನ್ನು ಚುನಾವಣೆಯಿಂದ ಹೊರಗಿಡುವ ಮೂಲಕ ತನ್ನ ಲಕ್ಷಾಂತರ ಬೆಂಬಲಿಗರನ್ನು ಉದ್ದೇಶಪೂರ್ವಕವಾಗಿ ವಂಚಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.ತಮ್ಮ ಪಕ್ಷವನ್ನು ಚುನಾವಣೆಯಲ್ಲಿ ನಿರ್ಬಂಧಿಸುವ ಮೂಲಕ ಮುಂಬರುವ ಸರ್ಕಾರವು, ವಿಭಜಿತ ರಾಷ್ಟ್ರವನ್ನು ಒಂದುಗೂಡಿಸಲು ಸಾಧ್ಯವಿಲ್ಲ. ದೇಶದ ಹೆಚ್ಚಿನ ಪ್ರಮಾಣದ ಜನರಿಗೆ ರಾಜಕೀಯ ಅವಕಾಶ ನಿರಾಕರಿಸುವುದು ಭವಿಷ್ಯದಲ್ಲಿ ಮತ್ತೊಮ್ಮೆ ಅಸ್ಥಿರತೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಶೇಕ್​ ಹಸೀನಾ ಅವರು ಅಭಿಪ್ರಾಯಪಟ್ಟಿದ್ದಾರೆ.
ನಾಗರಿಕ ದಂಗೆ ಬಳಿಕದ ಮೊದಲ ಚುನಾವಣೆ: ಬಾಂಗ್ಲಾದೇಶದಲ್ಲಿ ಫೆಬ್ರವರಿ 12ರಂದು ಚುನಾವಣೆ ನಡೆಸುವುದಾಗಿ ಅಲ್ಲಿನ ಮಧ್ಯಂತರ ಸರ್ಕಾರ ಘೋಷಿಸಿದೆ. 127 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕಳೆದ ವರ್ಷ ನಡೆದ ಸಾಮೂಹಿಕ ದಂಗೆ, ಹಸೀನಾ ಅವರನ್ನು ಅಧಿಕಾರದಿಂದ ತೆಗೆದುಹಾಕಿದ ನಂತರದ ಮೊದಲ ಚುನಾವಣೆ ಇದಾಗಿದೆ.
ಮೊಹಮದ್​​ ಯೂನಸ್​ ಅವರು ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಯ ಭರವಸೆ ನೀಡಿದ್ದಾರೆ. ಮಧ್ಯಂತರ ಸರ್ಕಾರವು ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದೆ. ರಾಜಕೀಯ ಸುಧಾರಣೆಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲಾಗಿದೆ. ದೇಶದೆಲ್ಲೆಡೆ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ.

 

Leave a Reply

Your email address will not be published. Required fields are marked *

error: Content is protected !!