ಉದಯವಾಹಿನಿ, ಚೀನಾದ ಝೆಜಿಯಾಂಗ್ ಪ್ರಾಂತ್ಯದ ನ್ಯಾಯಾಲಯವು ಒಂದೇ ಕುಟುಂಬದ 11 ಜನರಿಗೆ ಮರಣದಂಡನೆ ವಿಧಿಸಿದೆ. ಕೊಲೆ, ಅಕ್ರಮ ಬಂಧನ, ವಂಚನೆ, ಜೂಜಾಟ ಸೇರಿದಂತೆ ಒಟ್ಟು 14 ಗಂಭೀರ ಅಪರಾಧಗಳಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ. ಸೆಪ್ಟೆಂಬರ್ 2025ರಲ್ಲಿ ತೀರ್ಪು ನೀಡಲಾಗಿದ್ದು, ಇತ್ತೀಚೆಗೆ ಶಿಕ್ಷೆಯನ್ನು ಜಾರಿಗೆ ತರಲಾಗಿದೆ.ಈ ಕುಟುಂಬವು ಮ್ಯಾನ್ಮಾರ್–ಚೀನಾ ಗಡಿಯಲ್ಲಿರುವ ಕೊಕಾಂಗ್ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿತ್ತು. ಸುಮಾರು 1.4 ಬಿಲಿಯನ್ ಡಾಲರ್ ಮೌಲ್ಯದ ಆನ್‌ಲೈನ್ ವಂಚನೆ, ಟೆಲಿಕಾಂ ಸ್ಕ್ಯಾಮ್ ಹಾಗೂ ಹಣ ವರ್ಗಾವಣೆಯ ಜಾಲದಲ್ಲಿ ಈ ಕುಟುಂಬ ಪ್ರಮುಖ ಪಾತ್ರ ವಹಿಸಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಮಿಂಗ್ ಕುಟುಂಬವು ಹಲವು ವರ್ಷಗಳಿಂದ ಕೊಲೆ, ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿತ್ತು. 2017ರಿಂದ ಮ್ಯಾನ್ಮಾರ್ ಪ್ರದೇಶದಲ್ಲಿ ಹಲವು ನೆಲೆಗಳನ್ನು ಸ್ಥಾಪಿಸಿ ಅಕ್ರಮ ಕ್ಯಾಸಿನೊಗಳನ್ನೂ ನಡೆಸುತ್ತಿದ್ದರು.
ವಿದೇಶಗಳಿಂದ ಕೆಲಸಕ್ಕಾಗಿ ಕರೆತಂದವರನ್ನು ಈ ಕುಟುಂಬ ಬಲವಂತವಾಗಿ ಬಂಧಿಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರಿಗೆ ಭೀಕರ ಚಿತ್ರಹಿಂಸೆ ನೀಡುತ್ತಿತ್ತು. ಕೆಲವರ ಉಗುರುಗಳನ್ನು ಎಳೆದು ತೆಗೆದು ಕೊಲ್ಲಲಾಗುತ್ತಿತ್ತು ಎಂಬುದನ್ನು ಬಲಿಪಶುಗಳ ಕುಟುಂಬಗಳು ಆರೋಪಿಸಿವೆ. ಹೆಚ್ಚಿನ ಬಲಿಪಶುಗಳು ಚೀನಾದ ನಾಗರಿಕರಾಗಿದ್ದರು ಎಂಬುದು ಗಮನಾರ್ಹ. ಎರಡು ವರ್ಷಗಳ ಹಿಂದೆ ಲಾವೊಕೈ ಪ್ರದೇಶದಲ್ಲಿದ್ದ ಇವರ ನೆಲೆಗಳ ಮೇಲೆ ಬಂಡಾಯ ಗುಂಪುಗಳು ದಾಳಿ ನಡೆಸಿದಾಗ, ಮಿಂಗ್ ಕುಟುಂಬದ ಮುಖ್ಯಸ್ಥ ಮೃತಪಟ್ಟಿದ್ದರು. ನಂತರ ಉಳಿದ ಆರೋಪಿಗಳನ್ನು ಚೀನಾ ಪೊಲೀಸರು ಬಂಧಿಸಿದರು. ಈ ಪ್ರಕರಣವನ್ನು ಮಧ್ಯಂತರ ಪೀಪಲ್ಸ್ ಕೋರ್ಟ್ ತನಿಖೆ ನಡೆಸಿತು. ಚೀನಾ ಸುಪ್ರೀಂ ಕೋರ್ಟ್ ತೀರ್ಪಿನಂತೆ, 11 ಜನರಿಗೆ ಮರಣದಂಡನೆ, ಐದು ಮಂದಿಗೆ ಎರಡು ವರ್ಷಗಳ ಕಾಲಾವಕಾಶದೊಂದಿಗೆ ಮರಣದಂಡನೆ ಹಾಗೂ ಇನ್ನೂ 12 ಮಂದಿಗೆ 24 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಒಮ್ಮೆ ಬಡ ಗಡಿ ಪ್ರದೇಶವಾಗಿದ್ದ ಕೊಕಾಂಗ್, ಮಿಂಗ್ ಕುಟುಂಬದ ಕಾರಣದಿಂದ ಶತಕೋಟಿ ಡಾಲರ್ ಹಗರಣಗಳ ಕೇಂದ್ರವಾಗಿ ಮಾರ್ಪಟ್ಟಿತ್ತು.
