ಉದಯವಾಹಿನಿ, ಡೈನಾಮಿಕ್ ವೆಂಚರ್ಸ್ ಹಾಗೂ ಪುರಾತನ ಫಿಲಂ ಪ್ರೊಡಕ್ಷನ್ಸ್ ಸಹಯೋಗದಲ್ಲಿ ನೂತನ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಪ್ರಜ್ವಲ್ ದೇವರಾಜ್ ಈ ಚಿತ್ರದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ. ಎಂಜಿಆರ್ ಎಂಬ ವಿಶೇಷ ಶೀರ್ಷಿಕೆ ಈ ಚಿತ್ರಕ್ಕಿದೆ. ಚಿತ್ರದ ನಾಯಕ ಪ್ರಣಾಮ್ ದೇವರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ಬುಧವಾರ (ಜ.29) ಸಂಜೆ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಹಿರಿಯ ನಟ ದೇವರಾಜ್ ಅವರು ಮಗನ ಚಿತ್ರಕ್ಕೆ ಶುಭ ಹಾರೈಸುತ್ತ ಇದೊಂದು ಸಂತಸದ ಕ್ಷಣ. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳಾದ ಮೇಲೆ ನಿರ್ಮಾಪಕನಾದೆ. ಈಗ ನನ್ನ ಮಗ 10-12 ವರ್ಷಗಳಿಗೆ ನಿರ್ಮಾಪಕನಾಗಿದ್ದಾನೆ. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಇದರಲ್ಲೇ ಏನಾದರೂ ಮಾಡಬೇಕೆಂಬ ತುಡಿತವಿರುತ್ತದೆ. ಪುರಾತನ ಫಿಲಂಸ್ ಮಗನ ಜತೆ ಎರಡನೇ ಸಿನಿಮಾ ಮಾಡ್ತಿದಾರೆ. ಈ ಪೋಸ್ಟರ್ ನಲ್ಲಿ ಪ್ರಣಾಮ್ ಲುಕ್ ನೋಡಿ ನನಗೇ ಆಶ್ಚರ್ಯವಾಯ್ತು. ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಚರಣರಾಜ್ ನನಗೆ ಇಷ್ಟವಾದ ಮ್ಯೂಸಿಕ್ ಡೈರೆಕ್ಟರ್. ಅವರ ಹಾಡುಗಳು ನಮ್ಮ ಸೊಗಡನ್ನು ಬಿಟ್ಟು ಹೋಗುವುದಿಲ್ಲ. ಡಿಓಪಿ ಕೃಷ್ಣ ಮುತ್ತಣ್ಣ ಚಿತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದರು. ಹೀಗೆ ನಮ್ಮನ್ನು ಅರ್ಥ ಮಾಡಿಕೊಂಡವರ ಜತೆ ಕೆಲಸ ಮಾಡುವುದಕ್ಕೆ ಖುಷಿ ಆಗುತ್ತದೆ ಎಂದು ಹೇಳಿದರು. ಪುರಾತನ ಫಿಲಂಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ದಿವ್ಯ ಕೇಶವ್ ಮಾತನಾಡುತ್ತ ಪ್ರಜ್ವಲ್ ಅವರ ಜತೆ ಪ್ರೊಡ್ಯೂಸ್ ಮಾಡುವುದಕ್ಕೆ ತುಂಬಾ ಖುಷಿ ಆಗ್ತಿದೆ ಎಂದರು.
