ಉದಯವಾಹಿನಿ ,ಚಂಡೀಗಢ: ಹರಿಯಾಣದ ಗುರುಗ್ರಾಮದ ಹೋಟೆಲ್ ಒಂದರ ಬಾತ್‌ರೂಮ್‌ನಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರ ಶವ ಪತ್ತೆಯಾಗಿದೆ.
ಮೃತರನ್ನು ವಿಜಯ್ ಸರೂಪ್ (38) ಎಂದು ಗುರುತಿಸಲಾಗಿದೆ. ಅವರು ತಮ್ಮ ಕಂಪನಿಯ 9 ಮಂದಿ ಸಹೋದ್ಯೋಗಿಗಳೊಂದಿಗೆ ಮೂರು ದಿನಗಳ ಹಿಂದೆ ಗುರುಗ್ರಾಮಕ್ಕೆ ಬಂದಿದ್ದರು. ಸೆಕ್ಟರ್ 29ರಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್‌ನಲ್ಲಿ ಅವರೆಲ್ಲ ತಂಗಿದ್ದರು.
ಎಲ್ಲಾ ಉದ್ಯೋಗಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಕೆಲವರು ಬುಧವಾರ ಅಲ್ಲಿಂದ ಹೊರಟುಹೋಗಿದ್ದರು. ಸರೂಪ್ ಸೇರಿದಂತೆ ಇತರರು ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸರೂಪ್ ಗುರುವಾರ (ಜ.29) ಮಧ್ಯಾಹ್ನ ಹೊರಗೆ ಹೋಗಬೇಕಿತ್ತು. ಆದರೆ ಅವರ ರೂಮ್ ಬಳಿ ಕರೆದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲಿಸಿದಾಗ ಅವರ ಶವ ಬಾತ್ರೂಮ್ ಕಮೋಡ್ ಬಳಿ ಬಿದ್ದಿರುವುದು ಗೊತ್ತಾಗಿತ್ತು. ಪೊಲೀಸರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
