ಉದಯವಾಹಿನಿ , ನಿಯಾಮೆ: ನೈಗರ್‌ನ ರಾಜಧಾನಿ ನಿಯಾಮೆ ನಗರದ ವಿಮಾನ ನಿಲ್ದಾಣದ ಬಳಿ ಗುರುವಾರ ಮುಂಜಾನೆ ಭಾರಿ ಸ್ಫೋಟ ಮತ್ತು ಗುಂಡಿನ ಸದ್ದು ಕೇಳಿ ಬಂತು ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಸಂಘರ್ಷ ಪೀಡಿತ ದೇಶದಲ್ಲಿ ಶಸ್ತ್ರಧಾರಿ ಗುಂಪುಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಮಧ್ಯರಾತ್ರಿ ಸುಮಾರಿಗೆ ಡಿಯೋರಿ ಹಮಾನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಫೋಟದ ಭಾರಿ ಸದ್ದು ಮತ್ತು ಆಗಸದಲ್ಲಿ ಬೆಳಕು ಆವರಿಸಿದ ದೃಶ್ಯಗಳು ಕಂಡುಬಂದವು. ಸುಮಾರು ಎರಡು ಗಂಟೆಗಳವರೆಗೂ ಇದು ಮುಂದುವರಿದಿತ್ತು. ಈ ಪ್ರದೇಶ ನೈಜೀರಿಯಾ ಸೇನೆಯ ಪ್ರಮುಖ ಕೇಂದ್ರವೂ ಆಗಿದೆ.
ದಾಳಿ ಮತ್ತು ಸ್ಫೋಟಕ್ಕೆ ಕಾರಣ ಏನು ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸಾವು-ನೋವಿನ ಬಗ್ಗೆಯೂ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರೊಬ್ಬರ ಪ್ರಕಾರ ‘ಶಸ್ತ್ರ ಸಜ್ಜಿತರು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದರು. ಯೋಧರು ಪ್ರತ್ಯುತ್ತರ ನೀಡಿದರು. ಗುರುವಾರ ಬೆಳಗ್ಗೆ ನಂತರ ನಗರವು ಸಹಜ ಸ್ಥಿತಿಗೆ ಮರಳಿದೆ’ ಎಂದು ತಿಳಿಸಿದ್ದಾರೆ. ಆದರೆ ನೈಗರ್‌ನ ಸೇನೆ ದಾಳಿ ಬಗ್ಗೆ ಏನನ್ನೂ ಹೇಳಿಲ್ಲ.

Leave a Reply

Your email address will not be published. Required fields are marked *

error: Content is protected !!