ಉದಯವಾಹಿನಿ, ಟಿ20 ವಿಶ್ವಕಪ್ ಗೆ ಕ್ಷಣಗಣನೆ ಬಾಕಿ ಉಳಿದಿದ್ದು, ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ದಿನಕ್ಕೊಂದು ನಾಟಕ ಶುರು ಮಾಡಿದೆ. ಈ ಮೊದಲು ಟಿ20 ವಿಶ್ವಕಪ್‌ಗೆ ತಂಡವನ್ನು ಕಳುಹಿಸುವುದು ಇನ್ನು ನಿರ್ಧಾರವಾಗಿಲ್ಲ ಎಂದಿದ್ದ ಪಾಕ್ ಮಂಡಳಿ, ಆ ಬಳಿಕ ಈ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿತ್ತು. ಆದರೀಗ ಹೊಸ ವರಸೆ ಶುರು ಮಾಡಿರುವ ಪಾಕ್ ಮಂಡಳಿ, ಶನಿವಾರ ನಡೆಯಬೇಕಿದ್ದ ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದೆ.
ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಎರಡನೇ ಟಿ20 ಪಂದ್ಯದ ಟಾಸ್ ನಂತರ ಜೆರ್ಸಿಯನ್ನು ಅನಾವರಣಗೊಳಿಸಬೇಕಿತ್ತು. ಆದಾಗ್ಯೂ ಸರ್ಕಾರದ ವಿದೇಶಾಂಗ ಸಚಿವಾಲಯದ ಅನುಮತಿ ಸಿಕ್ಕಿಲ್ಲದ ಕಾರಣ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ, ಪಾಕಿಸ್ತಾನ ನಿಜವಾಗಿಯೂ ವಿಶ್ವಕಪ್ ಆಡುತ್ತದೆಯೇ ಅಥವಾ ಇಲ್ಲವೇ ಎಂಬ ಸಸ್ಪೆನ್ಸ್ ಉತ್ತುಂಗಕ್ಕೇರಿದೆ.
ಭಾರತ ಮತ್ತು ಶ್ರೀಲಂಕಾ 2026 ರ ಟಿ20 ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ, ಪಾಕಿಸ್ತಾನವು ಪ್ರತಿ ಹಂತದಲ್ಲೂ ಹೊಸ ಹೊಸ ಕ್ಯಾತೆ ತೆಗೆಯುತ್ತಿದೆ. ಪಿಸಿಬಿ ಅಧ್ಯಕ್ಷ ಮೊಕ್ಸಿನ್ ನಖಿ ಈಗಾಗಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಐಸಿಸಿ ಟೂರ್ನಮೆಂಟ್‌ನಿಂದ ಬಾಂಗ್ಲಾದೇಶವನ್ನು ತೆಗೆದುಹಾಕಿ ಸ್ಕಾಟ್ಲಂಡ್ ಅನ್ನು ಸೇರಿಸಿದ್ದನ್ನು ಪಾಕಿಸ್ತಾನ ತೀವ್ರವಾಗಿ ಪ್ರತಿಭಟಿಸುತ್ತಿದೆ.
ಪಾಕಿಸ್ತಾನ ತಂಡವು ಫೆಬ್ರವರಿ 2 (ಸೋಮವಾರ) ರಂದು ಕೊಲಂಬೊಗೆ ಪ್ರಯಾಣಿಸಲು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದೆ. ಅದೇ ದಿನ ಪಾಕಿಸ್ತಾನ ಸರ್ಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಸರ್ಕಾರ ಹಸಿರು ನಿಶಾನೆ ತೋರಿಸಿದರೆ, ತಂಡವು ನೇರವಾಗಿ ಶ್ರೀಲಂಕಾವನ್ನು ತಲುಪುತ್ತದೆ. ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನವು ತನ್ನ ಗುಂಪು ಪಂದ್ಯಗಳನ್ನು ಶ್ರೀಲಂಕಾದಲ್ಲಿಯೇ ಆಡಲಿದೆ. ಆದರೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!