ಉದಯವಾಹಿನಿ, ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ತಡರಾತ್ರಿ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಬಿ.ಎಲ್.ಶಂ
ಕರ್ ಅವರೊಂದಿಗೆ ನಿನ್ನೆ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿರುವ ಬಿ.ಕೆ.ಹರಿಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಬಿ.ಕೆ.ಹರಿಪ್ರಸಾದ್ ಅವರು ಈಡಿಗ, ಬಿಲ್ಲವ ಸಮಾವೇಶದಲ್ಲಿ ಮಾತನಾಡಿದ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಮುದಾಯದ ಅಭಿವೃದ್ಧಿಗೆ ಅನುದಾನ ಕೇಳಿದರೆ ಕೊಟ್ಟಿಲ್ಲ. ಹಿಂದುಳಿದ ವರ್ಗ ಎಂದರೆ ಕೇವಲ ಒಂದು ಜಾತಿ ಮಾತ್ರವಲ್ಲ ಎಂದು ಹೇಳಿಕೆ ನೀಡಿದ್ದಲ್ಲದೆ, ತಮಗೆ ಮುಖ್ಯಮಂತ್ರಿ ಮಾಡುವುದೂ ಗೊತ್ತು, ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸುವುದೂ ಗೊತ್ತು ಎಂದು ಹೇಳಿದ್ದರು. ಇದು ಭಾರೀ ಸಂಚಲನ ಮೂಡಿಸಿತ್ತು.
