ಉದಯವಾಹಿನಿ, ಟ್ರಿಪೊಲಿ, ಲಿಬಿಯಾ: ಹತ್ಯೆಗೀಡಾದ ಲಿಬಿಯಾ ನಾಯಕ ಮುಅಮ್ಮರ್ ಗಡಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗಡಾಫಿ ಮಂಗಳವಾರ ಪಶ್ಚಿಮ ಲಿಬಿಯಾದಲ್ಲಿ ನಡೆದ ಸಶಸ್ತ್ರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆಯನ್ನ ಉಲ್ಲೇಖಿಸಿ ವರದಿ ಮಾಡಲಾಗಿದೆ.
ಕ್ಸಿನ್ಹುವಾ ಪ್ರಕಾರ, ಗಡಾಫಿ ತಂಡದ ಸದಸ್ಯ ಅಬ್ದುಲ್ಲಾ ಒಥ್ಮಾನ್ ಅಬ್ದುರ್ರಹೀಮ್ ಅವರು ಫೇಸ್‌ಬುಕ್‌ನಲ್ಲಿ ಘಟನೆಯನ್ನು ಘೋಷಿಸಲಾಗಿದೆ. ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳು ಮಧ್ಯಾಹ್ನ ಜಿಂಟಾನ್ ನಗರದಲ್ಲಿರುವ ಗಡಾಫಿ ಅವರ ನಿವಾಸಕ್ಕೆ ನುಗ್ಗಿ ಈ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನೇರ ಸಶಸ್ತ್ರ ಘರ್ಷಣೆ ನಡೆಯುವ ಮೊದಲು ದಾಳಿಕೋರರು ಕಣ್ಗಾವಲು ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದು ಸೈಫ್ ಅಲ್-ಇಸ್ಲಾಂ ಸಾವಿಗೆ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ನಡುವೆ 53 ವರ್ಷದ ಸೈಫ್-ಅಲ್-ಇಸ್ಲಾಂ ಅವರನ್ನು ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಲಿಬಿಯಾದ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ದಾಳಿಯ ತನಿಖೆ, ಅಪರಾಧಿಗಳನ್ನು ಗುರುತಿಸುವುದು ಮತ್ತು ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಯಾರು ಎಂಬುದನ್ನು ಕಂಡು ಹಿಡಿಯಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ಟ್ರಿಪೋಲಿ ಮತ್ತು ಜಿಂಟಾನ್‌ನಲ್ಲಿರುವ ಅಧಿಕಾರಿಗಳು ಘಟನೆಯ ವಿವರಗಳನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಸೈಫ್ ಅಲ್ – ಇಸ್ಲಾಂ ಗಡಾಫಿ 2011 ರ ನ್ಯಾಟೋ ಬೆಂಬಲಿತ ಪಡೆಗಳು ಮುಅಮ್ಮರ್ ಗಡಾಫಿ ಆಡಳಿತವನ್ನು ಕೊನೆಗೊಳಿಸಿದ ನಂತರ ಲಿಬಿಯಾದಲ್ಲಿ ಪ್ರಮುಖ ಮತ್ತು ಧ್ರುವೀಕರಣಗೊಳಿಸುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಸೈಫ್ ಅಲ್ -ಇಸ್ಲಾಂ ಅವರನ್ನು ತಂದೆ ಮುಅಮ್ಮರ್ ಗಡಾಫಿ ಅವರ ಆಡಳಿತದ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿತ್ತು. ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಲಿಬಿಯಾವನ್ನು ಆಳಿದ್ದ ಗಡಾಫಿ ಅವರನ್ನು 2011ರಲ್ಲಿ ನಡೆದ ನ್ಯಾಟೋ ಬೆಂಬಲಿತ ದಂಗೆಯಲ್ಲಿ ಅಧಿಕಾರದಿಂದ ಕೆಳಗಿಳಿಸಲಾಗಿತ್ತು.
