ಉದಯವಾಹಿನಿ, ನ್ಯೂಯಾರ್ಕ್, ಅಮೆರಿಕ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ವಾಷಿಂಗ್ಟನ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಭೇಟಿ ಮಾಡಿದರು. ಬಹುಮುಖ್ಯ ಖನಿಜಗಳ ಕುರಿತಾದ ಮಹತ್ವದ ಸಭೆಗೂ ಮುನ್ನ ಈ ಭೇಟಿ ನಡೆದಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ಮಧ್ಯಾಹ್ನ ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಜೈಶಂಕರ್ ಅವರನ್ನು ರೂಬಿಯೊ ಭೇಟಿ ಮಾಡಿದರು. ಫೆಬ್ರವರಿ 2 – 4 ರವರೆಗೆ ಜೈಶಂಕರ್ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಬುಧವಾರ ರೂಬಿಯೊ ಆಯೋಜಿಸಿರುವ ಕ್ರಿಟಿಕಲ್ ಮಿನರಲ್ ಸಚಿವರ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಸಚಿವ ಜೈಶಂಕರ್, ಅಮೆರಿಕ ಆಡಳಿತದ ಹಿರಿಯ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಟ್ರೂತ್ ಸೋಷಿಯಲ್‌ನಲ್ಲಿ ಟ್ರಂಪ್ ಘೋಷಿಸಿದ ಒಂದು ದಿನದ ನಂತರ ಜೈಶಂಕರ್ ಮತ್ತು ರೂಬಿಯೊ ನಡುವಿನ ಸಭೆ ನಡೆದಿದೆ. ಭಾರತದ ಪ್ರಧಾನಿ ಜತೆ ದೂರುವಾಣಿ ಮಾತುಕತೆ ನಡೆಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ವಿಧಿಸಿದ್ದ ಶೇ 50 ತೆರಿಗೆಯನ್ನು ಶೇ 18ಕ್ಕೆ ಇಳಿಕೆ ಮಾಡಲಾಗಿದೆ. ಈ ವಿಷಯವನ್ನು ಟ್ರಂಪ್ ತಮ್ಮ ಟ್ರೂಥ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ಭಾರತೀಯ ವಿದೇಶಾಂಗ ಇಲಾಖೆಯೂ ದೃಢಪಡಿಸಿತ್ತು. ಬಳಿಕ ಪ್ರಧಾನಿ ಮೋದಿ ಸಹ ಸುಂಕವನ್ನು ಶೇ 18ಕ್ಕೆ ಇಳಿಕೆ ಮಾಡಿರುವುದಕ್ಕೆ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದ ತಿಳಿಸಿದ್ದರು.
ಇಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರನ್ನು ಭೇಟಿ ಮಾಡಲು ಸಂತೋಷವಾಯಿತು. ಭಾರತ ಮತ್ತು ಅಮೆರಿಕದ ಆರ್ಥಿಕ ಪಾಲುದಾರಿಕೆ ಮತ್ತು ಕಾರ್ಯತಂತ್ರದ ಸಹಕಾರದ ಕುರಿತು ಉಪಯುಕ್ತ ಚರ್ಚೆ ನಡೆಯಿತು ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ತಮ್ಮ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆ ಬಳಿಕ ದ್ವಿಪಕ್ಷೀಯ ವ್ಯಾಪಾರದ ಕುರಿತಾದ ಪ್ರಕಟಣೆಗಳನ್ನು ವಿದೇಶಾಂಗ ಸಚಿವರು ಸ್ವಾಗತಿಸಿದರು. ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಎರಡೂ ಆರ್ಥಿಕತೆಗಳಲ್ಲಿ ನಾವೀನ್ಯತೆಗೆ ದಾರಿ ಮಾಡಿಕೊಡುತ್ತದೆ. ಅಷ್ಟೇ ಅಲ್ಲ ಇದು ಮೇಕ್ ಇನ್ ಇಂಡಿಯಾ ಪ್ರಯತ್ನಗಳನ್ನು ಬಲಪಡಿಸುತ್ತದೆ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನ ಸಂಬಂಧಗಳನ್ನು ಪ್ರೋತ್ಸಾಹಿಸುತ್ತದೆ. ಬಲವಾದ ಆರ್ಥಿಕ ಸಂಬಂಧವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಬಲವಾದ ಅಡಿಪಾಯವಾಗಿದೆ ಎಂದು ಜೈ ಶಂಕರ್ ಬಣ್ಣಿಸಿದ್ದಾರೆ.
