ಉದಯವಾಹಿನಿ, ಬಿಹಾರ : ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷವು 2025ರ ಬಿಹಾರ ವಿಧಾನಸಭಾ ಚುನಾವಣೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಮಾದರಿ ನೀತಿ ಸಂಹಿತೆ (ಎಂಸಿಸಿ) ಸಮಯದಲ್ಲಿ ಮಹಿಳಾ ಮತದಾರರಿಗೆ ₹10,000 ನೇರ ವರ್ಗಾವಣೆ ಮಾಡಿರುವುದು ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರುವ ಪ್ರಯತ್ನವಾಗಿದ್ದು, ರಾಜ್ಯದಲ್ಲಿ ಮರು ಚುನಾವಣೆ ನಡೆಸಬೇಕೆಂದು ಪಕ್ಷ ಕೋರಿದೆ. ವಕೀಲ ಆದಿತ್ಯ ಸಿಂಗ್ ಮೂಲಕ ಸುಪ್ರೀಂ ಕೋರ್ಟ್ಗೆ ಜನ್ ಸುರಾಜ್ ಪಕ್ಷ ಅರ್ಜಿ ಸಲ್ಲಿಸಿದೆ. ‘ಅಕ್ಟೋಬರ್ 6, 2025 ರಂದು ನೀತಿ ಸಂಹಿತೆ ಘೋಷಣೆಯ ಬಳಿಕ ಮುಕ್ತ ಮತ್ತು ನ್ಯಾಯಯುತ ಚುನಾವಣೆಯ ತತ್ವಗಳಿಗೆ ವಿರುದ್ಧವಾಗಿ ಬಿಹಾರ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದೆ, ಜೊತೆಗೆ 25-35 ಲಕ್ಷ (ಅಂದಾಜು) ಹೊಸ ಫಲಾನುಭವಿಗಳಿಗೂ ನೇರ ಹಣ ವರ್ಗಾವಣೆ ಮಾಡಲಾಗಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕ್ರಿಯೆ ಮೂಲಕ ಬಿಹಾರ ಸರ್ಕಾರವು ಅನಗತ್ಯ ಪ್ರಭಾವ ಬೀರಿ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಓಲೈಸಲು ರೂಪಿಸಿದ ಯೋಜನೆಯಾಗಿತ್ತು. ಬಿಹಾರ ಸರ್ಕಾರದ ಈ ನಡೆ ಸಂಪೂರ್ಣ ಚುನಾವಣಾ ಫಲಿತಾಂಶವನ್ನೇ ಹಾಳು ಮಾಡಿದೆ. ಈ ಭ್ರಷ್ಟಾಚಾರದ ಕೃತ್ಯದಿಂದ ಚುನಾವಣಾ ಫಲಿತಾಂಶವನ್ನು ಅಮಾನ್ಯವೆಂದು ಘೋಷಿಸುವುದಕ್ಕೆ ತೀರ್ಮಾನಿಸಲು ಯಾವುದೇ ಸಂದೇಹವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
“ಜೀವಿಕಾ ದೀದಿ ಯೋಜನೆಯ ಮೂಲಕ ಅಸ್ತಿತ್ವದಲ್ಲಿದ್ದ ಮತ್ತು ಹೊಸದಾಗಿ ಲಕ್ಷಾಂತರ ಫಲಾನುಭವಿಗಳ ಖಾತೆಗಳಿಗೆ 10,000 ರೂ. ಹಣ ಹಾಕುವ ಮೂಲಕ ಬಿಹಾರ ಸರ್ಕಾರವು ನೀತಿ ಸಂಹಿತೆ ಮತ್ತು ಮುಕ್ತ ನ್ಯಾಯಯುತ ಚುನಾವಣೆಯ ನಿಯಮಗಳನ್ನು ಒಂದು ಹೆಜ್ಜೆ ಮುಂದೆ ಹೋಗಿ ಉಲ್ಲಂಘಿಸಿದೆ” ಎಂದು ಅರ್ಜಿಯಲ್ಲಿ ದೂರಲಾಗಿದೆ. ಡಿಬಿಟಿ ಯೋಜನೆಗೆ ಹೊಸ ಫಲಾನುಭವಿಗಳನ್ನು ಸೇರಿಸುವುದು ಮತ್ತು ನೀತಿ ಸಂಹಿತೆ ಸಮಯದಲ್ಲಿ ಹೊಸ ಫಲಾನುಭವಿಗಳಿಗೆ ಆರ್ಥಿಕ ಪ್ರಯೋಜನ ನೀಡುವುದು ಆಡಳಿತ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ನೇರ/ಪರೋಕ್ಷ ಪ್ರೇರಣೆಯಾಗಲಿದೆೆ. ಇದು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 ರಂತೆ ಲಂಚ ಮತ್ತು ಭ್ರಷ್ಟಾಚಾರಕ್ಕೆ ಸಮ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
