ಉದಯವಾಹಿನಿ, ಮಾಸ್ಕೋ(ರಷ್ಯಾ): ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಮುಕ್ತವಾಗಿದೆ ಎಂದು ರಷ್ಯಾ ಹೇಳಿದೆ.
ರಷ್ಯಾ ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಒಬ್ಬನೇ ಪೂರೈಕೆದಾರನಲ್ಲ. ಈ ವಿಚಾರ ನಮಗೆ ಮತ್ತು ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಿಗೂ ಚೆನ್ನಾಗಿ ಗೊತ್ತಿದೆ. ಭಾರತ ಯಾವಾಗಲೂ ಇತರ ದೇಶಗಳಿಂದ ಈ ಉತ್ಪನ್ನಗಳನ್ನು ಖರೀದಿಸಿದೆ. ಆದ್ದರಿಂದ, ನಾವು ಇಲ್ಲಿ ಹೊಸದನ್ನೇನೂ ಕಾಣುತ್ತಿಲ್ಲ ಎಂದು ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಬುಧವಾರ ತಿಳಿಸಿದರು.
ಪ್ರಧಾನಿ ಮೋದಿ ಅವರು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಮತ್ತು ಅಮೆರಿಕ ಹಾಗು ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸಲು ಒಪ್ಪಿಕೊಂಡಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಕುರಿತ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
ಇದಕ್ಕೆ ಒಂದು ದಿನ ಮೊದಲು, ನಮ್ಮಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತದಿಂದ ಯಾವುದೇ ಹೇಳಿಕೆ ಬಂದಿಲ್ಲ ಎಂದು ಪೆಸ್ಕೋವ್ ಹೇಳಿದ್ದರು.
ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಅವರು ಪ್ರತಿಕ್ರಿಯಿಸುತ್ತಾ, ಹೈಡ್ರೋಕಾರ್ಬನ್ ವ್ಯಾಪಾರವು ಭಾರತ ಮತ್ತು ರಷ್ಯಾ ಎರಡೂ ದೇಶಗಳಿಗೂ ಪ್ರಯೋಜನಕಾರಿ. ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಇದು ವಿಶೇಷ ಕೊಡುಗೆ ನೀಡುತ್ತದೆ. ಭಾರತದಲ್ಲಿನ ನಮ್ಮ ಪಾಲುದಾರರೊಂದಿಗೆ ಈ ಕ್ಷೇತ್ರದಲ್ಲಿ ನಿಕಟ ಸಹಕಾರವನ್ನು ಮುಂದುವರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ರಷ್ಯಾದ ರಾಷ್ಟ್ರೀಯ ಇಂಧನ ಭದ್ರತಾ ನಿಧಿಯ ಪ್ರಮುಖ ತಜ್ಞ ಇಗೊರ್ ಯುಷ್ಕೋವ್ ಅವರ ಪ್ರಕಾರ, ಭಾರತೀಯ ಸಂಸ್ಕರಣಾಗಾರರು ರಷ್ಯಾದ ಕಚ್ಚಾ ತೈಲ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ.
ಭಾರತದ ವಿರುದ್ಧ ಟ್ರಂಪ್ ಕಳೆದ ವರ್ಷ ಶೇ.50ರಷ್ಟು ಸುಂಕ ವಿಧಿಸಿದ್ದರು. ಇದರಲ್ಲಿ ರಷ್ಯಾದ ಇಂಧನ ಖರೀದಿಗಾಗಿಯೇ ಶೇ.25ರಷ್ಟು ಸುಂಕ ಹಾಕಿದ್ದಾರೆ.
ಭಾರತ ತನ್ನ ಕಚ್ಚಾ ತೈಲದ ಸುಮಾರು ಶೇ.88ರಷ್ಟನ್ನು ವಿವಿಧ ದೇಶಗಳಿಂದ ಖರೀದಿಸುತ್ತದೆ. ಇದನ್ನು ನಂತರ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ.

2021ರವರೆಗೆ ಭಾರತ ಆಮದು ಮಾಡಿಕೊಂಡ ಎಲ್ಲಾ ಕಚ್ಚಾ ತೈಲದಲ್ಲಿ ರಷ್ಯಾದಿಂದ ಆಮದಾದ ತೈಲದ ಪ್ರಮಾಣ ಕೇವಲ ಶೇ 0.2ರಷ್ಟಿತ್ತು. ಆದರೆ, 2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ದೂರವಿಟ್ಟವು. ಇದಾದ ನಂತರ ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಸುತ್ತಿತ್ತು. ಇದರ ಪರಿಣಾಮ ಭಾರತವು ರಷ್ಯಾದ ಅತಿದೊಡ್ಡ ಕಚ್ಚಾತೈಲ ಖರೀದಿದಾರನಾಯಿತು.

Leave a Reply

Your email address will not be published. Required fields are marked *

error: Content is protected !!