ಉದಯವಾಹಿನಿ, ಬಿಹಾರ: ಅಂತಾರಾಷ್ಟ್ರೀಯ ಪ್ರವಾಸಿ ತಾಣವಾದ ರಾಜಗೀರ್‌ನ ದಿಗಂಬರ ಜೈನ ಧರ್ಮಶಾಲೆಯ ಕೊಠಡಿಯೊಂದರಲ್ಲಿ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬೆಂಗಳೂರು ಮೂಲದ ನಾಲ್ವರು ಶವವಾಗಿ ಪತ್ತೆ: ಧರ್ಮಶಾಲಾದ ರಿಜಿಸ್ಟರ್ ಪ್ರಕಾರ, ಬೆಂಗಳೂರಿನ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿ ನಾಲ್ವರು ಜ.31 ರಂದು ರೂಂ ಬುಕ್ ಮಾಡಿದ್ದರು. ಇವರು ನೇಪಾಳ ಪ್ರವಾಸದಿಂದ ಇಲ್ಲಿಗೆ ಬಂದು ಪಾವಾಪುರಿಗೆ ಪ್ರಯಾಣ ಬೆಳೆಸುವ ಯೋಚನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಆದರೆ ಏಕಾಏಕಿ ರೂಂನಲ್ಲಿ ನಾಲ್ವರೂ ಶವವಾಗಿ ಪತ್ತೆಯಾಗಿದ್ದಾರೆ.
ನಾಲ್ವರು ಒಂದೇ ಕುಟುಂಬ: ಕೊಠಡಿಯನ್ನು ಬೆಂಗಳೂರಿನ ನಿವಾಸಿ ಜಿ.ಆರ್. ನಾಗ ಪ್ರಸಾದ್ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಮೃತರನ್ನು ಬೆಂಗಳೂರಿನ ನಾಗಸಂದ್ರ (ಸೋಲದೇವನಹಳ್ಳಿ ಪೊಲೀಸ್ ಠಾಣೆ ಪ್ರದೇಶ)ದ ಒಂದೇ ಕುಟುಂಬದ ಸದಸ್ಯರು ಎಂದು ಗುರುತಿಸಲಾಗಿದೆ. ಮೃತರಲ್ಲಿ ವೃದ್ಧ ಮಹಿಳೆ (ಸುಮಾರು 70 ವರ್ಷದ ವಿಶೇಷಚೇತನ ತಾಯಿ), ಅವರ 50 ವರ್ಷದ ಅವಿವಾಹಿತ ಮಗ (ಜಿ.ಆರ್. ನಾಗ ಪ್ರಸಾದ್) ಮತ್ತು ಇತರ ಇಬ್ಬರು ಮಹಿಳೆಯರು (ವಿಚ್ಛೇದಿತ ಮತ್ತು ಅವಿವಾಹಿತ ಸಹೋದರಿ) ಸೇರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭರತ್ ಸೋನಿ ಮಾಹಿತಿ ನೀಡಿದ್ದಾರೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ಕಾರಣ ಗೊತ್ತಾಗಲಿದೆ. ಘಟನಾ ಸ್ಥಳಕ್ಕೆ ಪಾಟ್ನಾದ ಎಫ್‌ಎಸ್‌ಎಲ್ ತಂಡ ಆಗಮಿಸಿ ತನಿಖೆ ಕೈಗೊಂಡಿದೆ.
ಕೊಠಡಿಯಲ್ಲಿ ನಿದ್ರೆ ಮಾತ್ರೆ ಪತ್ತೆ: ಇವರ ಕುಟುಂಬದಲ್ಲಿ ನಾಲ್ವರು ಸದಸ್ಯರು ಮಾತ್ರ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈವರೆಗೆ ಇವರ ಹತ್ತಿರದ ಯಾವ ಸಂಬಂಧಿಕರು ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಮೃತರ ಕೊಠಡಿಯಲ್ಲಿ ನಗದು ಹಣ ಮತ್ತು 25 ನಿದ್ರೆ ಮಾತ್ರೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಒಳಗಡೆಯಿಂದ ಬಾಗಿಲು ಲಾಕ್ ಆಗಿದ್ದರಿಂದ ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
