ಉದಯವಾಹಿನಿ, ನಾಗೌರ್(ರಾಜಸ್ಥಾನ): ಚಿನ್ನ ನಿನ್ನ ಸಹವಾಸವೇ ಬೇಡ ಅನ್ನೋ ಪರಿಸ್ಥಿತಿ ಬಂದಿದೆ. ಏಕೆಂದರೆ, ರೇಟು ಹಾಗಿದೆ. ರಾಜಸ್ಥಾನದಲ್ಲಿ ಹಕ್ಕಿಗೂ ಚಿನ್ನದ ಮೇಲೆ ವ್ಯಾಮೋಹ ಬಂದಿದೆ ಅನ್ಸುತ್ತೆ. ನೇರವಾಗಿ ಚಿನ್ನದಂಗಡಿಗೆ ಹಾರಿ ಬಂದ ಪಾರಿವಾಳವೊಂದು ಕೊಕ್ಕಿನಲ್ಲಿ ಚಿನ್ನದ ಸರವನ್ನೇ ಎತ್ತಿಕೊಂಡು ಹೋಗಿದೆ. ಇದನ್ನು ಕಂಡ ಅಂಗಡಿ ಮಾಲೀಕ ಕಕ್ಕಾಬಿಕ್ಕಿ.
ಇಲ್ಲಿನ ದೇಗಾನ ನಗರದ ಚಿನ್ನದಂಗಡಿಯಲ್ಲಿ ಕುಶಲಕರ್ಮಿಗಳು ಆಭರಣಗಳನ್ನು ಸಿದ್ಧಪಡಿಸುತ್ತಿದ್ದರು. ಅಷ್ಟರಲ್ಲಿ ಪಾರಿವಾಳವೊಂದು ಆಭರಣ ಅಂಗಡಿಯೊಳಗೇ ಹಾರಿ ಬಂದು ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ಹಾರಿಹೋಯಿತು. ಕಣ್ಣೆದುರೇ ನಡೆದ ಘಟನೆಯಿಂದ ಆಭರಣ ವ್ಯಾಪಾರಿಗೆ ಮಂಡೆ ಬಿಸಿಯಾಯ್ತು. ಸುದ್ದಿ ಇಡೀ ಮಾರುಕಟ್ಟೆಯೆಲ್ಲೆಡೆ ಹಬ್ಬಿತು. ಜನ ಸೇರಿದ್ರು. ಎಲ್ಲೆಡೆ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಹೀಗೆ ಹಾರಿ ಹೋದ ಪಾರಿವಾಳ ಮಾರುಕಟ್ಟೆಯ ಛಾವಣಿಯೊಂದರ ಮೇಲೆ ಕುಳಿತುಕೊಂಡಿತು. ಬಹಳ ಹೊತ್ತು ಅಲ್ಲೇ ಇದ್ದು, ಚಿಂತೆಗೀಡಾದ ಜನಸ್ತೋಮವನ್ನು ಗಮನಿಸುತ್ತಿತ್ತು. ಅಂಗಡಿಯವರು ಮತ್ತು ಇತರೆ ವ್ಯಾಪಾರಿಗಳು ಸ್ವಲ್ಪ ಸಮಯದವರೆಗೆ ಏನೂ ಮಾಡಲಾಗದೇ ತಲೆ ಕೆರೆದುಕೊಳ್ಳುತ್ತಿದ್ದರು. ಸ್ಥಳದಲ್ಲಿದ್ದ ಜನರು ಪಾರಿವಾಳದ ಮೇಲೆ ಕಣ್ಣಿಟ್ಟು ಸರವನ್ನು ಹೇಗಾದರೂ ಮಾಡಿ ಸುರಕ್ಷಿತವಾಗಿ ಪಡೆಯಲು ಪ್ರಯತ್ನಿಸುತ್ತಿದ್ದರು. ತುಂಬಾ ಹೊತ್ತು ವಿವಿಧ ಕಸರತ್ತುಗಳು ನಡೆದವು. ಅಷ್ಟರಲ್ಲಿ, ಪಾರಿವಾಳ ಅಲ್ಲಿಂದ ಹಾರಿಹೋಯಿತು. ಚಿನ್ನದ ಸರ ಅದರ ಕೊಕ್ಕಿನಿಂದ ಜಾರಿ ಕೆಳಗೆ ಬಿತ್ತು. ಲಕ್ಷ ಬೆಲೆಬಾಳುವ ಸರ ಕೈಗೆತ್ತಿಕೊಂಡ ವ್ಯಾಪಾರಿ ನಿಟ್ಟುಸಿರು ಬಿಟ್ಟ!.
