ಉದಯವಾಹಿನಿ, ಹೈದರಾಬಾದ್: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಓಲಾ, ಉಬರ್ ಮತ್ತು ರ‍್ಯಾಪಿಡೋಗಳಲ್ಲಿ ನೋಂದಾಯಿಸಲ್ಪಟ್ಟವರು ಸೇರಿದಂತೆ ಆ್ಯಪ್ ಆಧಾರಿತ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಚಾಲಕರ ಒಕ್ಕೂಟವು ಇಂದು ದೇಶಾದ್ಯಂತ ಮುಷ್ಕರ ನಡೆಸಿದೆ. ಅಕ್ರಮ ಬೈಕ್ ಟ್ಯಾಕ್ಸಿ ಸೇವೆಗಳು ಮತ್ತು ಅನಿಯಂತ್ರಿತ ಶುಲ್ಕ ನೀತಿ, ಪ್ಯಾನಿಕ್ ಬಟನ್‌ಗಳ ಅಳವಡಿಕೆಯ ಕುರಿತಾದ ಕುಂದುಕೊರತೆಗಳನ್ನು ಪರಿಹರಿಸುವಂತೆ ಬೇಡಿಕೆ ಇರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಕಾಮಗಾರ್ ಸಭಾ ತಿಳಿಸಿದೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಸಭಾ, ಕೇಂದ್ರ ಸರ್ಕಾರದಿಂದ ಅನುಮೋದಿಸಲ್ಪಟ್ಟ 140 ಪ್ಯಾನಿಕ್ ಬಟನ್ ಸಾಧನ ಪೂರೈಕೆದಾರರು ಇದ್ದರೂ, ರಾಜ್ಯ ಸರ್ಕಾರವು ಈ ಕಂಪನಿಗಳಲ್ಲಿ ಸುಮಾರು ಶೇ. 70 ಕಂಪನಿಗಳನ್ನು ಅನಧಿಕೃತವೆಂದು ಘೋಷಿಸಿದೆ. ಇದರ ಪರಿಣಾಮವಾಗಿ, ಕ್ಯಾಬ್ ಚಾಲಕರು ಈಗಾಗಲೇ ಹಾಕಿರುವ ಸಾಧನಗಳನ್ನು ತೆಗೆದುಹಾಕಿ, ಹೊಸ ಸಾಧನ ಅಳವಡಿಕೆಗೆ 12,000 ರೂ. ಖರ್ಚು ಬೀಳುತ್ತಿದ್ದು, ಇದು ಆರ್ಥಿಕ ಸಂಕಷ್ಟ ಹೆಚ್ಚಿಸಲಿದೆ. ಓಪನ್ ಪರ್ಮಿಟ್ ನೀತಿಯಡಿಯಲ್ಲಿ ಆಟೋರಿಕ್ಷಾಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಆದಾಯ ನಷ್ಟ ಹೆಚ್ಚಿದೆ. ಅಕ್ರಮ ಬೈಕ್ ಟ್ಯಾಕ್ಸಿಗಳನ್ನು ಅಪಘಾತ ಸಂತ್ರಸ್ತರಿಗೆ ವಿಮಾ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ.
2025 ರ ಅಗ್ರಿಗೇಟರ್ ಮಾರ್ಗಸೂಚಿಗಳ ಅಡಿಯಲ್ಲಿ ಕಡ್ಡಾಯಗೊಳಿಸಲಾದ ಮಾನ್ಯತೆ ಪಡೆದ ಕಾರ್ಮಿಕ ಸಂಘಗಳೊಂದಿಗೆ ಸಮಾಲೋಚಿಸಿ ಅಪ್ಲಿಕೇಶನ್ ಆಧಾರಿತ ಸಾರಿಗೆ ಸೇವೆಗಳಿಗೆ ಕನಿಷ್ಠ ಮೂಲ ದರಗಳನ್ನು ತಕ್ಷಣ ಪ್ರಕಟಿಸುವುದು ಒಕ್ಕೂಟದ ಪ್ರಮುಖ ಬೇಡಿಕೆ ಆಗಿದೆ. ವಾಣಿಜ್ಯ ಪ್ರಯಾಣಿಕ ಮತ್ತು ಸರಕು ಸಾಗಣೆಗೆ ಖಾಸಗಿ (ವಾಣಿಜ್ಯೇತರ) ವಾಹನಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು ಅಥವಾ ಮೋಟಾರು ವಾಹನ ಕಾಯ್ದೆ ಮತ್ತು ಅಗ್ರಿಗೇಟರ್ ಮಾರ್ಗಸೂಚಿಗಳು, 2025ರ ಪ್ರಕಾರ ವಾಣಿಜ್ಯ ವರ್ಗದ ವಾಹನಗಳಾಗಿ ಕಡ್ಡಾಯವಾಗಿ ಪರಿವರ್ತಿಸುವುದಕ್ಕೆ ಒತ್ತಾಯಿಸಲಾಗಿದೆ.
