ಉದಯವಾಹಿನಿ, ಗುವಾಹಟಿ (ಅಸ್ಸಾಂ): ಮೇಘಾಲಯದ ಸುಟ್ಂಗಾದಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿದೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಗಣಿಯಲ್ಲಿ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಮೇಘಾಲಯ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಈ ಘಟನೆ ಕುರಿತು ಶುಕ್ರವಾರ ಮಾತನಾಡಿದ ಪೂರ್ವ ಜೈನ್ತಿಯಾ ಹಿಲ್ಸ್​ ಎಸ್​ಪಿ ವಿಕಾಸ್ ಕುಮಾರ್, ಈ ಭೀಕರ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.

ಸ್ಥಳದಲ್ಲಿ ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಸ್ಫೋಟ ಸಂಭವಿಸಿದ ದಿನ ಎಷ್ಟು ಜನ ಕಾರ್ಮಿಕರು ಗಣಿಯೊಳಗೆ ಇದ್ದರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇಲ್ಲಿ ರ್ಯಾಟ್​ ಹೋಲ್​ ಗಣಿಗಾರಿಕೆ ಮೂಲಕ ಅಕ್ರಮವಾಗಿ ಕಲ್ಲಿದ್ದಲು ಹೊರತರುವ ಕೆಲಸ ಸಾಗಿರುವುದು ಸಹ ಕಂಡು ಬಂದಿದೆ. ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, 70 ರಿಂದ 100 ಜನರು ಸ್ಫೋಟ ಸಂಭವಿಸಿದ ದಿನದಂದು ಗಣಿಗಾರಿಕೆಗೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಕಳಪೆ ಗೋಚರತೆ ಮತ್ತು ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ತಡರಾತ್ರಿವರೆಗೆ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ರಾತ್ರಿ ನಾಲ್ವರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಶಿಲ್ಲಾಂಗ್ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 25ಕ್ಕೆ ಏರಿದೆ. ಈ 25 ರಲ್ಲಿ 17 ಜನರ ಗುರುತು ಪತ್ತೆಯಾಗಿದೆ. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಅವರ ಶವಗಳನ್ನು ಅವರವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಸ್ಪೋಟದ ಘಟನೆಗೆ ಸಂಬಂಧಿಸಿದಂತೆ, ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಖ್ಲೈಹ್ರಿಯತ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಪ್ರಕರಣ ಸಂಬಂಧ ಜಲಫೆಟ್ ಪರ್ದುಂಗ್ ನಿವಾಸಿ ಫಾರ್ಮೆ ಚೆರ್ಮಾಂಗ್ (36) ಮತ್ತು ಸುತ್ಂಗಾ ಪಹ್ವೈತಾಂಗ್ ನಿವಾಸಿ ಶಮೇಹಿ ವಾರ್ (42) ಬಂಧಿಸಿದ್ದು, ಇವರನ್ನೂ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಇವರ ವಿಚಾರಣೆ ಬಳಿಕ ಘಟನೆಯ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ.

ಮೇಘಾಲಯದಿಂದ ದೂರದಲ್ಲಿರುವ ಈ ಪ್ರದೇಶವು ಬಹಳ ಹಿಂದಿನಿಂದಲೂ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗೆ ಕುಖ್ಯಾತಿ ಪಡೆದುಕೊಂಡಿದೆ. ಈ ಕುರಿತು ತನಿಖೆಗಳು ಮುಂದುವರೆದಿದ್ದು, ಅಕ್ರಮ ಗಣಿಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಇತರ ಶಂಕಿತರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!