ಉದಯವಾಹಿನಿ, ಫರಿದಾಬಾದ್ (ಹರಿಯಾಣ): ಫರಿದಾಬಾದ್‌ನ ಸೂರಜ್‌ಕುಂಡ್ ಜಾತ್ರೆಯಲ್ಲಿ ಶನಿವಾರ ಬೃಹತ್ ಉಯ್ಯಾಲೆ ಕುಸಿದು ಬಿದ್ದು ಪೊಲೀಸ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ, ಪಾಲ್ವಾಲ್‌ನ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಉಯ್ಯಾಲೆ ಕುಸಿದ ತಕ್ಷಣ ಗಾಯಾಳುಗಳನ್ನು ರಕ್ಷಿಸಲು ಧಾವಿಸಿದ್ದು, ಈ ವೇಳೆ ಗಂಭೀರ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಪ್ರಸಾದ್ ಅವರು ಮಾರ್ಚ್‌ನಲ್ಲಿ ನಿವೃತ್ತರಾಗಬೇಕಿತ್ತು. ಜನರನ್ನು ಉಳಿಸಲು ಪ್ರಯತ್ನಿಸಿ ಧೈರ್ಯ ತೋರಿದರು. ಆದರೆ ಈ ಸಂದರ್ಭದಲ್ಲಿ ಮುಖ ಮತ್ತು ತಲೆಗೆ ತೀವ್ರ ಗಾಯಗಳಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಉಯ್ಯಾಲೆ ಕೆಳಗೆ ಬೀಳುತ್ತಿರುವುದನ್ನು ನೋಡಿದ ಜನರು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣೆಯಲ್ಲಿ ತೊಡಗಿದರು. ಪೊಲೀಸರ ತ್ವರಿತ ಕ್ರಮದಿಂದ ಹಲವಾರು ಜೀವಗಳನ್ನು ಉಳಿಸಲು ಸಾಧ್ಯವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಘಟನೆ ಬೆನ್ನಲ್ಲೇ, ಉಪ ಆಯುಕ್ತ ಆಯುಷ್ ಸಿನ್ಹಾ ಮತ್ತು ಪ್ರವಾಸೋದ್ಯಮ ವ್ಯವಸ್ಥಾಪಕ ಪಾರ್ಥ್ ಗುಪ್ತಾ ಅವರು ತಕ್ಷಣ ಸ್ಥಳಕ್ಕೆ ತಲುಪಿದರು. ಗಾಯಾಳುಗಳ ಚಿಕಿತ್ಸೆಗೆ ತಕ್ಷಣ ವ್ಯವಸ್ಥೆ ಮಾಡಲಾಯಿತು ಎಂದು ಸಿನ್ಹಾ ತಿಳಿಸಿದರು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಸ್ಟಾಲ್ ಆಪರೇಟರ್ ಕೂಡ ಉಯ್ಯಾಲೆಯ ಗ್ರಿಲ್ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ.
ಉಯ್ಯಾಲೆ ಅಪಘಾತಕ್ಕೂ ಕೇವಲ ಒಂದು ಗಂಟೆ ಮುನ್ನ, ಜಾತ್ರಾ ಮೈದಾನದ ಗೇಟ್ವೊಂದು ಹಠಾತ್ ಕುಸಿದು ಬಿದ್ದು, ವ್ಯಕ್ತಿ ಹಾಗೂ ಮಗು ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಿಕೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಯ್ಯಾಲೆ ಅವಘಡದಲ್ಲಿ ಒಟ್ಟು 12 ಜನರು ಗಾಯಗೊಂಡಿದ್ದಾರೆ. ಹೆಚ್ಚಿನ ಅನಾಹುತ ತಡೆಯಲು ಆ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ತಾಂತ್ರಿಕ ದೋಷದಿಂದಾಗಿ ಉಯ್ಯಾಲೆ ಮೋಟಾರ್ ವೈಫಲ್ಯಗೊಂಡು ಬೇರಿಂಗ್ ಮುರಿದು ದುರಂತ ಸಂಭವಿಸಿದೆ. ಘಟನೆ ಬಳಿಕ ಜಾತ್ರೆಯಲ್ಲಿನ ಇತರ ಉಯ್ಯಾಲೆಗಳ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಲಾಗಿದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
