ಉದಯವಾಹಿನಿ, ಕೋವಿಡ್ ವಕ್ಕರಿಸುವುದಕ್ಕೂ ಮುನ್ನವೇ ಸಾವನ್ನಪ್ಪಿದ ಜೆಫ್ರೀ ಎಪ್ಸ್ಟೀನ್ ಎನ್ನುವ ವ್ಯಕ್ತಿಯ ಹೆಸರು ಈಗ ಜಾಗತಿಕವಾಗಿ ಸದ್ದು ಮಾಡುವುದು ಹೆಚ್ಚಾಗಿದೆ. ಎಪ್ಸ್ಟೀನ್ ಫೈಲ್ಸ್ಗಳು ಹೊರಗೆ ಬರುತ್ತಲೇ ಇವೆ. ಜಗತ್ತಿನ ವಿವಿಧ ನಾಯಕರು, ಸೆಲಬ್ರಿಟಿಗಳ ಹೆಸರು ಎಪ್ಸ್ಟೀನ್ ಫೈಲ್ಗಳಲ್ಲಿ ಕಾಣುತ್ತಿವೆ ಎನ್ನುವಂತಹ ಸುದ್ದಿಗಳು ಕೇಳಿಬರುವುದೂ ಹೆಚ್ಚಾಗಿದೆ. ಜಾಗತಿಕ ನಾಯಕರು, ಸಿನಿಮಾ ತಾರೆಯರು, ವಿಜ್ಞಾನಿಗಳು, ಉದ್ಯಮಿಗಳು ಹೀಗೆ ಬಹಳಷ್ಟು ದೊಡ್ಡ ದೊಡ್ಡವರ ಹೆಸರು ಈ ಎಪ್ಸ್ಟೀನ್ ಫೈಲ್ಗಳಲ್ಲಿ ಕಾಣಿಸಿವೆ.
ಜೆಫ್ರೀ ಎಪ್ಸ್ಟೀನ್ ಲೈಂಗಿಕ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ 2006ರಲ್ಲಿ ಬಂಧಿತನಾಗಿದ್ದ. ತನ್ನ ಫಾರ್ಮ್ಗಳಲ್ಲಿ ಅಪ್ರಾಪ್ತೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದನೆಂಬ ಆರೋಪಗಳು ಸಾಲು ಸಾಲಾಗಿ ಕೇಳಿಬರತೊಡಗಿದವು. ಈತನ ಮೇಲೆ ಸುದೀರ್ಘ ತನಿಖೆ ಮತ್ತು ವಿಚಾರಣೆಗಳು ನಡೆದಿವೆ. ಆದರೆ, 2019ರಲ್ಲಿ ನ್ಯೂಯಾರ್ಕ್ನ ಜೈಲೊಂದರಲ್ಲಿ ಈತ ಸಾವನಪ್ಪಿದ್ದಾನೆ. ಬಹಳ ನಿಗೂಢವಾಗಿರುವ ಸಾವು ಅದು.
