ಉದಯವಾಹಿನಿ, ಮಾಸ್ಕೋ(ರಷ್ಯಾ): ರಷ್ಯಾದ ಬಾಷ್ಕೋರ್ಟೊಸ್ತಾನ್ ಗಣರಾಜ್ಯದ ಉಫಾದಲ್ಲಿರುವ ವಿಶ್ವವಿದ್ಯಾಲಯವೊಂದರ ಆವರಣದಲ್ಲಿ ಶನಿವಾರ ನಡೆದ ಚಾಕು ಇರಿತದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
“ಉಫಾದಲ್ಲಿ ದಾಳಿಯ ದುರದೃಷ್ಟಕರ ಘಟನೆ ಸಂಭವಿಸಿದೆ. ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿ ಸಂಪರ್ಕದಲ್ಲಿದೆ. ಕಜಾನ್‌ನಲ್ಲಿರುವ ಕಾನ್ಸುಲೇಟ್‌ನ ಅಧಿಕಾರಿಗಳು ಗಾಯಗೊಂಡ ವಿದ್ಯಾರ್ಥಿಗಳಿಗೆ ನೆರವಾಗಲು ಉಫಾಗೆ ತೆರಳುತ್ತಿದ್ದಾರೆ” ಎಂದು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್​​ ಪೋಸ್ಟ್‌ನಲ್ಲಿ ಹೇಳಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಚಾಕು ಹೊಂದಿದ್ದ ಅಪ್ರಾಪ್ತನೋರ್ವ ಬಾಷ್ಕೋರ್ಟೊಸ್ತಾನ್ ಗಣರಾಜ್ಯದ ಉಫಾದಲ್ಲಿರುವ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದ ವಸತಿ ನಿಲಯಕ್ಕೆ ಪ್ರವೇಶಿಸಿದ್ದಾನೆ. ಬಳಿಕ ಅಲ್ಲಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ, ಹಲವರಿಗೆ ಇರಿದಿದ್ದಾನೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ದಾಳಿಕೋರನನ್ನು ಬಂಧಿಸಲು ಮುಂದಾದಾಗ ತೀವ್ರ ಪ್ರತಿರೋಧ ತೋರಿದ್ದಾನೆ. ಈ ಸಮಯದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಇರಿದಿದ್ದಾನೆ. ಆಲ್ಲದೆ, ಆರೋಪಿ ತನಗೂ ಸಹ ಚಾಕುವಿನಿಂದ ಗಾಯ ಮಾಡಿಕೊಂಡಿದ್ದಾನೆ” ಎಂದು ಆಂತರಿಕ ಸಚಿವಾಲಯದ ವಕ್ತಾರೆ ಮೇಜರ್ ಜನರಲ್ ಐರಿನಾ ವೋಲ್ಕ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ದಾಳಿಯಲ್ಲಿ ಗಾಯಗೊಂಡ ನಾಲ್ವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಫೆಡರಲ್ ಆರೋಗ್ಯ ಸಚಿವಾಲಯ ಒಂದು ಪ್ರಕಟಣೆಯಲ್ಲಿ ತಿಳಿಸಿದೆ. ಒಬ್ಬನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇತರ ಮೂವರು ಸ್ಥಿರವಾಗಿದ್ದಾರೆ ಎಂದು ಹೇಳಿದೆ. ಗಾಯಗಳಿಂದಾಗಿ ಗಂಭೀರ ಸ್ಥಿತಿಯಲ್ಲಿರುವ 15 ವರ್ಷದ ಆರೋಪಿ ದಾಳಿಕೋರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾಜಾ ಟೆಲಿಗ್ರಾಮ್ ಚಾನೆಲ್ ತಿಳಿಸಿದೆ. ಮಾಸ್ಕೋದಿಂದ ಸುಮಾರು 1,200 ಕಿ.ಮೀ ಪೂರ್ವಕ್ಕೆ ಬಾಷ್ಕೋರ್ಟೊಸ್ತಾನ್ ಗಣರಾಜ್ಯದ ರಾಜಧಾನಿ ಉಫಾದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳು ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ. ದಾಳಿಕೋರ ನಿಷೇಧಿತ ನವ-ನಾಜಿ ಸಂಘಟನೆಗೆ ಸೇರಿದವರು ಎಂದು ಬಾಜಾ ಚಾನೆಲ್ ಹೇಳಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!