ಉದಯವಾಹಿನಿ, ಚಿಕ್ಕಮಗಳೂರು: ಕಳಸ ಮತ್ತು ಎನ್‌ಆರ್‌ ಪುರ ತಾಲೂಕಿನ ವ್ಯಾಪ್ತಿಯ ದಟ್ಟ ಅರಣ್ಯದಲ್ಲಿ ನಿಗೂಢವಾಗಿ ಲಘು ವಿಮಾನವೊಂದು ಹಾರಾಡಿದ್ದು, ಮಲೆನಾಡಿಗರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಭದ್ರಾ ನದಿಯ ತೀರದ ಉದ್ದಕ್ಕೂ ಈ ಲಘು ವಿಮಾನ ಎರಡು ಬಾರಿ ಹಾರಾಡಿದೆ. ತೀರಾ ಕೆಳಭಾಗದಲ್ಲಿ ಹಾರಾಟ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ವಿಮಾನ ಯಾರಿಗೆ ಸೇರಿದ್ದು? ಅದರೊಳಗೆ ಯಾರಿದ್ದರು? ಅದು ಎಲ್ಲಿಂದ ಬಂದು ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಕಳಸ ತಾಲೂಕಿನಿಂದ ಹಾರಾಟ ಆರಂಭಿಸಿದ ಈ ವಿಮಾನ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಎರಡು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಶಿವಮೊಗ್ಗ ಭಾಗದತ್ತ ಸಾಗಿದೆ. ಖಾಸಗಿ ವ್ಯಕ್ತಿಗಳು ವಿಮಾನ ಹಾರಾಟ ಮಾಡಿದ್ದಾರಾ? ಅಥವಾ ಯಾವುದಾದರೂ ಸರ್ಕಾರಿ ಇಲಾಖೆಯ ಅಧಿಕೃತ ಸರ್ವೆಗೆ ಸಂಬಂಧಿಸಿದ್ದೋ ಎಂಬ ಬಗ್ಗೆ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಯಾವುದೇ ಮಾಹಿತಿಯಿಲ್ಲದಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ. ಬಾಳೆಹೊನ್ನೂರಿನಲ್ಲಿ ತೀರಾ ಕೆಳಭಾಗದಲ್ಲಿ ಈ ವಿಮಾನ ಹಾರಾಡುತ್ತಿದ್ದ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಈ ಕಿರು ವಿಮಾನದ ಹಾರಾಟದ ಬಗ್ಗೆ ಸಂಬಂಧಪಟ್ಟ ಯಾವುದೇ ಇಲಾಖೆಗಳಿಗೆ ಮುನ್ಸೂಚನೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಸಂಶಯ ಹುಟ್ಟಿಸಿದೆ. ಹಾಗಾಗಿ, ಇದೀಗ ಕಳಸ-ಬಾಳೆಹೊನ್ನೂರು ಪೊಲೀಸರು ಲಘು ವಿಮಾನ ಹಾರಾಟದ ವಿವರ ಕಲೆಹಾಕುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!