ಉದಯವಾಹಿನಿ, ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ಹಕ್ಕಿ ಜ್ವರ ವೇಗವಾಗಿ ಹರಡುತ್ತಿದೆ. ಇದರ ಬೆನ್ನಲ್ಲೆ ಅರ್ಧ ಬೇಯಿಸಿದ ಮೊಟ್ಟೆಗಳನ್ನು ತಿನ್ನದಂತೆ ತಮಿಳುನಾಡು ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.ಕಳೆದ ವಾರ ಚೆನ್ನೈನಲ್ಲಿ ಗುಂಪು ಗುಂಪಾಗಿ ಕಾಗೆಗಳು ಸತ್ತಿರುವುದು ಕೂಡ ವರದಿಯಾಗಿದೆ. ನಂತರ, ಅವುಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಈ ಕಾಗೆಗಳಿಗೆ ಹಕ್ಕಿ ಜ್ವರ ಸೋಂಕು ತಗುಲಿರುವುದು ತಿಳಿದು ಬಂದಿದೆ. ನಂತರ ತಮಿಳುನಾಡಿನಾದ್ಯಂತ ಹಕ್ಕಿ ಜ್ವರವನ್ನು ತಡೆಗಟ್ಟಲು ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆಂಧ್ರಪ್ರದೇಶದಲ್ಲಿಯೂ ಕೆಲವು ಪ್ರಕರಣಗಳು ವರದಿಯಾಗಿವೆ. ಇದರಿಂದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಈ ವೈರಸ್ ಪಕ್ಷಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಈ ವೈರಸ್ ಪಕ್ಷಿಗಳಿಂದ ಮನುಷ್ಯರಿಗೆ ಹರಡಿದರೆ ಇದನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಸತ್ತ ಪಕ್ಷಿಗಳನ್ನು ಬರಿ ಕೈಗಳಿಂದ ಮುಟ್ಟುವುದನ್ನು ತಪ್ಪಿಸಬೇಕು, ಪುರಸಭೆ ಅಥವಾ ನಿಗಮಕ್ಕೆ ಈ ಬಗ್ಗೆ ತಕ್ಷಣ ತಿಳಿಸುವುದು, ಚಿಕನ್ ಅನ್ನು ತಿನ್ನುವ ಮೊದಲು ಚೆನ್ನಾಗಿ ಬೇಯಿಸುವುದು ಮುಂತಾದ ವಿವಿಧ ಸೂಚನೆಗಳನ್ನು ತಮಿಳುನಾಡಿನ ಸಾರ್ವಜನಿಕ ಆರೋಗ್ಯ ಇಲಾಖೆಯು ನೀಡಿದೆ.
ಹಕ್ಕಿ ಜ್ವರದ ಕುರಿತು ತಮಿಳುನಾಡು ಸಾರ್ವಜನಿಕ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಅವರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಚೆನ್ನೈನ ಓಮಂಡುರಾರ್ ಸರ್ಕಾರಿ ಮಲ್ಟಿ – ಡಿವಿಷನ್ ಹೈ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಕಾರ್ಡಿಯಾಕ್ ಕ್ಯಾತಿಟರೈಸೇಶನ್ ಲ್ಯಾಬ್ ಅನ್ನು ಆರೋಗ್ಯ ಸಚಿವರು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳಿಗೆ ನೋಟಿಸ್ ಕಳುಹಿಸಿದೆ. ಪಕ್ಷಿಗಳು ಸತ್ತರೆ, ಅವುಗಳನ್ನು 5 ಅಡಿ ಆಳದಲ್ಲಿ ಹೂಳಬೇಕು. ಸತ್ತ ಕೋಳಿಗಳನ್ನು ಬೇಯಿಸಿ ತಿನ್ನಬಾರದು ಎಂದ ಅವರು, ತಮಿಳುನಾಡಿನಲ್ಲಿ ಹಕ್ಕಿ ಜ್ವರ ಹರಡುವಿಕೆ ನಿಯಂತ್ರಣದಲ್ಲಿದೆ. ಇಲ್ಲಿಯವರೆಗೆ ಯಾವುದೇ ಮನುಷ್ಯನಿಗೆ ಹಕ್ಕಿ ಜ್ವರ ಇರುವುದು ದೃಢಪಟ್ಟಿಲ್ಲ ಎಂದು ತಿಳಿಸಿದರು.
