ಉದಯವಾಹಿನಿ, ಇಸ್ಲಾಮಾಬಾದ್(ಪಾಕಿಸ್ತಾನ): ಅಮೆರಿಕ ತನ್ನ ರಾಜಕೀಯ ಆದ್ಯತೆ, ಅಗತ್ಯ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿಗಾಗಿ ನಮ್ಮ ದೇಶವನ್ನು ಟಿಶ್ಯೂ ಪೇಪರ್ ಅಲ್ಲ, ಟಾಯ್ಲೆಟ್ ಪೇಪರ್‌ಗಿಂತಲೂ ಕಡೆಯಾಗಿ ಬಳಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖವಾಜಾ ತೀವ್ರ ಬೇಸರ ವ್ಯಕ್ತಪಡಿಸಿದರು.ಮಂಗಳವಾರ ಪಾಕಿಸ್ತಾನ ಸಂಸತ್‌ನಲ್ಲಿ ಅವರು ಮಾತನಾಡುತ್ತಿದ್ದರು. ಆಸಿಫ್ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

1999ರ ನಂತರ ನಾವು ಅಫ್ಘಾನಿಸ್ತಾನದಲ್ಲಿ ಅಮೆರಿಕದೊಂದಿಗೆ ಕೈಜೋಡಿಸಿದ್ದು ದೊಡ್ಡ ತಪ್ಪು. ಇದರಿಂದಾಗಿ ದೇಶ ಬಹಳ ನಷ್ಟ ಅನುಭವಿಸಿತು. ಅದರ ಪರಿಣಾಮಗಳನ್ನು ನಾವು ಇನ್ನೂ ಅನುಭವಿಸುತ್ತಿದ್ದೇವೆ ಎಂದು ಅವರು ಹೇಳಿದರು. 1999ರಲ್ಲಿ ಆಗಿನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರ ನೇತೃತ್ವದ ಸೇನೆ, ಪ್ರಧಾನಿ ನವಾಜ್ ಷರೀಫ್ ಸರ್ಕಾರವನ್ನು ಉರುಳಿಸಿ ಅಧಿಕಾರವನ್ನು ವಶಪಡಿಸಿಕೊಂಡಿತು. 2001ರ ನಂತರ ಅವರ ಸರ್ಕಾರ ಅಮೆರಿಕದ ಬೆಂಬಲದೊಂದಿಗೆ ಭಯೋತ್ಪಾದನೆ ನಿರ್ಮೂಲನೆ ಮಾಡಲು ತಾಲಿಬಾನ್ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಹೀಗಿದ್ದೂ, ತಾಲಿಬಾನ್ ನಮ್ಮ ವಿರುದ್ಧ ಈಗಲೂ ಹಿಂಸಾಚಾರ ನಡೆಸುತ್ತಿದೆ. ಅದೇ ಅಫ್ಘಾನಿಸ್ತಾನ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವಾಗ ಅಮೆರಿಕ ಅವರಿಗೆ ಯಾವುದೇ ಸಹಾಯ ನೀಡಲಿಲ್ಲ ಎಂದರು. ಮಾಜಿ ಮಿಲಿಟರಿ ಸರ್ವಾಧಿಕಾರಿಗಳಾದ ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಅವರು ಅಫ್ಘಾನಿಸ್ತಾನದ ವಿರುದ್ಧದ ಯುದ್ಧಕ್ಕೆ ಸೇರಿಕೊಂಡರು. ಇಸ್ಲಾಂ ಧರ್ಮದ ಸಲುವಾಗಿ ಅಲ್ಲ. ಬದಲಾಗಿ ಒಂದು ದೊಡ್ಡ ಶಕ್ತಿಯನ್ನು(ಅಮೆರಿಕ) ಸಮಾಧಾನಪಡಿಸಲು ಅವರು ಕೈಜೋಡಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ನಮ್ಮ ಇತಿಹಾಸವನ್ನು ನಿರಾಕರಿಸುತ್ತೇವೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಭಯೋತ್ಪಾದನೆಯು ಹಿಂದೆ ಸರ್ವಾಧಿಕಾರಿಗಳು ಮಾಡಿದ ತಪ್ಪುಗಳ ಹೊಡೆತಗಳು ಇವೆಲ್ಲ ಎಂದು ದೂರಿದರು. ಮುಂದುವರೆದು, ನಾವು ಅನುಭವಿಸಿದ ನಷ್ಟಗಳನ್ನು ಎಂದಿಗೂ ಸರಿದೂಗಿಸಲು ಸಾಧ್ಯವೇ ಇಲ್ಲ ಎನ್ನುತ್ತಾ ಪಾಕಿಸ್ತಾನದ ತಪ್ಪುಗಳನ್ನು ತಿದ್ದಲಾಗದ್ದು ಎಂದು ಅವರು ಬಣ್ಣಿಸಿದರು.

ಗಡಿಯಲ್ಲಿ ಮುಂದುವರೆದ ಪಾಕಿಸ್ತಾನದ ಕಳ್ಳಾಟ: ಪಾಕಿಸ್ತಾನದ ಮತ್ತೊಂದು ದುಷ್ಕೃತ್ಯವನ್ನು ನಿನ್ನೆ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ರಾಜಸ್ತಾನದ ಖಜುವಾಲಾ ಅಂತಾರಾಷ್ಟೀಯ ಗಡಿ ಪ್ರದೇಶದಲ್ಲಿ ವಿಫಲಗೊಳಿಸಿದೆ. ಡ್ರೋನ್​ ಮೂಲಕ ದೊಡ್ಡ ಪ್ರಮಾಣದ ಹೆರಾಯಿನ್​ ಸಾಗಾಟವನ್ನು ತಟಸ್ಥಗೊಳಿಸಿದೆ.ಬಿಎಸ್‌ಎಫ್ ಮತ್ತು ಖಜುವಾಲಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 2 ಕೆ.ಜಿ ಹೆರಾಯಿನ್​ ವಶಕ್ಕೆ ಪಡೆಯಲಾಗಿದೆ. ಖಾಜುವಾಲಾ ಪೊಲೀಸ್ ಠಾಣಾ ಪ್ರದೇಶದ ಚಕ್ 14 ಬಿಡಿ ಬಳಿಯ ಚಕ್ 1 ಬಿಎಂನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!