ಉದಯವಾಹಿನಿ, ವ್ಯಾಂಕೋವರ್(ಕೆನಡಾ): ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಶಂಕಿತ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
“ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಇಪ್ಪತ್ತೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರಿಗೆ ಮಾರಣಾಂತಿಕ ಗಾಯವಾಗಿದೆ” ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಂತೀಯ ಸರ್ಕಾರಿ ವೆಬ್‌ಸೈಟ್ ಪ್ರಕಾರ, ಟಂಬ್ಲರ್ ರಿಡ್ಜ್ ಮಾಧ್ಯಮಿಕ ಶಾಲೆಯಲ್ಲಿ 7ರಿಂದ 12ನೇ ತರಗತಿವರೆಗೆ 175 ವಿದ್ಯಾರ್ಥಿಗಳಿದ್ದಾರೆ.

ಗುಂಡಿನ ದಾಳಿ ಮಾಡಿದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಆತನ ವಿವರ ಮತ್ತು ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಶಂಕಿತನ ಉದ್ದೇಶವೂ ಸ್ಪಷ್ಟವಾಗಿಲ್ಲ ಎಂದು ಆರ್‌ಸಿಎಂಪಿ ಸೂಪರಿಂಟೆಂಡೆಂಟ್ ಕೆನ್ ಫ್ಲಾಯ್ಡ್ ವರದಿಗಾರರಿಗೆ ತಿಳಿಸಿದರು. ಈ ಘಟನೆಗೆ ಕಾರಣ ಏನು?, ಗುಂಡು ಹಾರಿಸಲು ಪ್ರೇರೇಪಿಸಿದ ಘಟನೆ ಯಾವುದು ಎಂಬ ಕುರಿತು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಸದ್ಯ ನಾವಿಲ್ಲ. ಸಂತ್ರಸ್ತರು ಮತ್ತು ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ನಡುವಿನ ಸಂಬಂಧದ ಕುರಿತು ತನಿಖೆ ನಡೆಸುತ್ತಿದ್ದೇವೆ. ಗುಂಡು ಹಾರಿಸಿರುವ ವ್ಯಕ್ತಿ ಎಂದು ನಂಬಲಾಗಿರುವವ ಕೂಡ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಅವರು ವಿವರ ನೀಡಿದ್ದಾರೆ. ಶಂಕಿತನನ್ನು ಹೊರತುಪಡಿಸಿ ಆರು ಇತರ ವ್ಯಕ್ತಿಗಳು ಶಾಲೆಯೊಳಗೆ ಮೃತಪಟ್ಟಿದ್ದಾರೆ. ಗಂಭೀರ ಅಥವಾ ಮಾರಣಾಂತಿಕವಾಗಿ ಗಾಯಗೊಂಡ ಇಬ್ಬರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಮೂರನೇ ಸಂತ್ರಸ್ತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ಘಟನೆಯ ಬಳಿಕ ಇದೀಗ ಪೀಸ್ ರಿವರ್ ಸೌತ್ ಸ್ಕೂಲ್ ಡಿಸ್ಟ್ರಿಕ್ಟ್ ಮಾಧ್ಯಮಿಕ ಶಾಲೆ ಮತ್ತು ಟಂಬ್ಲರ್ ರಿಡ್ಜ್ ಎಲಿಮೆಂಟರಿ ಶಾಲೆಯನ್ನು ಲಾಕ್​ಡೌನ್​ ಮಾಡಲಾಗಿದೆ. ಪರಿಸ್ಥಿತಿ ನಮ್ಮ ಹಿಡಿತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಪೀಸ್ ರಿವರ್ ಸೌತ್‌ನ ಶಾಸಕಾಂಗ ಸದಸ್ಯ ಲ್ಯಾರಿ ನ್ಯೂಫೆಲ್ಡ್, ಊಹಿಸಲು ಅಸಾಧ್ಯವಾದ ದುರಂತ ಇದು. ಮುಂದಿನ ದಿನಗಳಲ್ಲಿ ಸಮುದಾಯದ ಸದಸ್ಯರಿಗೆ ಸರ್ಕಾರ ಸಾಧ್ಯವಿರುವ ಬೆಂಬಲವನ್ನು ನೀಡಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!