ಉದಯವಾಹಿನಿ, ಮಾಸ್ಕೋ: ಕಡಿಮೆ ದರದಲ್ಲಿ ನಮ್ಮಿಂದ ತೈಲ ಖರೀದಿಸುತ್ತಿದ್ದ ಭಾರತ ಸೇರಿದಂತೆ ಇತರೆ ನಮ್ಮ ಪಾಲುದಾರ ದೇಶಗಳನ್ನು ನಿರ್ಬಂಧಿಸುವ ಬೆದರಿಕೆಯನ್ನು ಅಮೆರಿಕ ಹಾಕುತ್ತಿದೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್​ ಮಾಧ್ಯಮ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಅಮೆರಿಕದ​ ನೀತಿಗಳ ಬಗ್ಗೆ ಕಿಡಿ ಕಾರಿದ್ದಾರೆ.

ಬ್ರಿಕ್ಸ್​ ಜೊತೆಗಿನ ಹಲವು ವಿಚಾರಗಳ ಕುರಿತು ಮಾತನಾಡಿರುವ ಅವರು, ಕಳೆದ ವರ್ಷ ಅಲಸ್ಕಾದಲ್ಲಿ ಶಾಂತಿ ಮಾತುಕತೆ ಹಾಗೂ ವಾಷಿಂಗ್ಟನ್ ಆರ್ಥಿಕ ಪ್ರಾಬಲ್ಯ ಸಾಧಿಸಲು ಸುಂಕ, ನಿರ್ಬಂಧ ಮತ್ತು ನೇರ ನಿಷೇಧದಂತಹ ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ತನ್ನ ಗುರಿ ಸಾಧಿಸುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಮೆರಿಕ ಉಕ್ರೇನ್​ ಸಮಸ್ಯೆ ಪರಿಹರಿಸಬೇಕು ಎಂದು ನಮಗೆ ಹೇಳುತ್ತದೆ. ಅಂಕಾರೇಜ್​ನಲ್ಲಿ ನಾವು ಅಮೆರಿಕದ ಪ್ರಸ್ತಾವನೆಯನ್ನು ಒಪ್ಪಿಕೊಂಡೆವು. ಆ ಸಂದರ್ಭದಲ್ಲಿ ಅಮೆರಿಕದ ನಿಲುವು ನಮಗೆ ಮುಖ್ಯವಾಗಿತ್ತು. ಪ್ರಸ್ತಾವನೆ ಒಪ್ಪಿಕೊಳ್ಳುವ ಮೂಲಕ ಉಕ್ರೇನ್​ ಸಮಸ್ಯೆಯನ್ನು ಪರಿಹರಿಸಲು ಮತ್ತು ಪರಸ್ಪರ ಸಹಕಾರದತ್ತ ಸಾಗುವ ಕಾರ್ಯ ಪೂರ್ಣಗೊಳಿಸಿದೆವು. ಆದರೆ, ವಾಸ್ತವವು ಸಂಪೂರ್ಣ ವಿರುದ್ಧವಾಗಿದೆ. ಹೊಸ ನಿರ್ಬಂಧ ವಿಧಿಸಲಾಗಿದ್ದು, ವಿಶ್ವಸಂಸ್ಥೆಯ ಸಮುದ್ರದ ಕಾನೂನು ಉಲ್ಲಂಘಿಸಿ, ಸಮುದ್ರದಲ್ಲಿ ಟ್ಯಾಂಕರ್‌ಗಳ ವಿರುದ್ಧ ಯುದ್ಧ ನಡೆಸಲಾಗುತ್ತಿದೆ.

ಅಗ್ಗದ ದರದಲ್ಲಿ ತೈಲ ಖರೀದಿಸುತ್ತಿದ್ದ ಭಾರತ ಮತ್ತು ನಮ್ಮ ಇತರೆ ಭಾಗೀದಾರರನ್ನು ನಿರ್ಬಂಧಿಸುವ ಬೆದರಿಕೆ ಹಾಕುತ್ತಿದ್ದು, ಕಡಿಮೆ ಬೆಲೆಗೆ ಯುಎಸ್ ಎಲ್‌ಎನ್‌ಜಿ ಖರೀದಿಸಲು ಒತ್ತಾಯಿಸುತ್ತಿದ್ದಾರೆ. ಅಮೆರಿಕ ಆರ್ಥಿಕ ಪ್ರಾಬಲ್ಯ ಸಾಧಿಸುವ ಉದ್ದೇಶ ಹೊಂದಿದೆ. ಅಮೆರಿಕ ಪ್ರಮುಖ ದೇಶಗಳಿಗೆ ತನ್ನ ಇಂಧನ ಮೂಲಗಳನ್ನು ಒದಗಿಸಲು ಮಾರ್ಗಗಳನ್ನು ನಿಯಂತ್ರಿಸಲು ಬಯಸುತ್ತಿದೆ ಎಂದು ಟೀಕಿಸಿದರು.

ರಷ್ಯಾದಿಂದ ತೈಲ ಖರೀದಿ ವಿಚಾರವಾಗಿ ಸೋಮವಾರ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ರಾಷ್ಟ್ರೀಯ ಹಿತಾಸಕ್ತಿ ಅನುಗುಣವಾಗಿ ತನ್ನ ನಿರ್ಧಾರಗಳನ್ನು ಮುಂದುವರಿಸುತ್ತದೆ. ದೇಶದ ಇಂಧನ ನೀತಿಯಲ್ಲಿ ಸಾಕಷ್ಟು ಲಭ್ಯತೆ, ನ್ಯಾಯಯುತ ಬೆಲೆ ಮತ್ತು ಪೂರೈಕೆಯ ವಿಶ್ವಾಸಾರ್ಹತೆಗೆ ಒತ್ತು ನೀಡಲಾಗುವುದು ಎಂದಿದ್ದಾರೆ.

ವಾಣಿಜ್ಯ ಸಚಿವ ಪಿಯೂಷ್​ ಗೋಯಲ್​ ಮಾತನಾಡಿ, ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆ. ರಷ್ಯಾದ ತೈಲ ಆಮದಿನ ಬಗ್ಗೆ ಭಾರತದ ನಿರ್ಧಾರಗಳನ್ನು ದೇಶೀಯ ಖರೀದಿದಾರರು ಮಾತ್ರ ತೆಗೆದುಕೊಳ್ಳುತ್ತಾರೆ. ಇದು ಭಾರತ ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟಿನಿಂದ ನಿರ್ದೇಶಿಸಲ್ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!