ಉದಯವಾಹಿನಿ, ಬೆಂಗಳೂರು:
 ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಎಟಿಎಂ ವಾಹನದಿಂದ 7.11 ಕೋಟಿ ದರೋಡೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, 56ನೇ ಸಿಸಿಎಚ್ ನ್ಯಾಯಾಲಯಕ್ಕೆ 1,328 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಕೇಸ್‌ನಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಅಣ್ಣಪ್ಪ ನಾಯ್ಕ ಸೇರಿ 9 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಕರಣದ ಎಲ್ಲಾ ಆರೋಪಿಗಳು ಒಟ್ಟಾಗಿ ಸಂಚು ರೂಪಿಸಿ ಸಿಎಂಎಸ್ ವಾಹನದಲ್ಲಿ ಎಟಿಎಂ ಕೇಂದ್ರಕ್ಕೆ ತುಂಬಲು ಕೊಂಡೊಯ್ಯುತ್ತಿದ್ದ ಹಣವನ್ನು ದರೋಡೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಇನ್ನು ಆರೋಪಿಗಳು ಮಾಡಿದ್ದ ಸಾಲ ತೀರಿಸಲು ಹಾಗೂ ಐಷಾರಾಮಿ ಜೀವನಕ್ಕಾಗಿ ಹಣ ದರೋಡೆ ಮಾಡಿದ್ದಾರೆ. ಹಣ ದರೋಡೆ ಬಳಿಕ ಆರೋಪಿಗಳು ಗೋವಾಗೆ ತೆರಳಿ ಕ್ಯಾಸಿನೋಗಳಿಗೆ ಹೋಗಿ ಮೋಜು ಮಸ್ತಿ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದರು. ಆದರೆ, ಅದಕ್ಕೂ ಮೊದಲೇ ಸಿಕ್ಕಿಬಿದ್ದಿದ್ದಾರೆ.

2025ರ ನ.19ರಂದು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಡೇರಿ ವೃತ್ತದ ಮೇಲ್ಸೇತುವೆಯಲ್ಲಿ ಎಟಿಎಂಗೆ ಸಾಗಿಸುವ ವಾಹನ ಅಡ್ಡಗಟ್ಟಿದ್ದ ಆರೋಪಿಗಳು, ಅದರಲ್ಲಿದ್ದ 7.11 ಕೋಟಿ ಹಣ ದರೋಡೆ ಮಾಡಿ ಪರಾರಿ ಆಗಿದ್ದರು. ಹೀಗಾಗಿ ಚೆನ್ನೈ, ಆಂಧ್ರ ಪ್ರದೇಶ ಸೇರಿ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್ ಅಣ್ಣಪ್ಪನಾಯ್ಕ, ಸಿಎಂಎಸ್ ಏಜೆನ್ಸಿ ಮಾಜಿ ಉದ್ಯೋಗಿ ಕ್ಸೇವಿಯರ್, ಸಹಚರರಾದ ರವಿ, ನೆಲ್ಸನ್, ಗೋಪಾಲ್, ಮಂಜುನಾಥ್ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮತ್ತು ಜಯನಗರ ಎಸಿಪಿ ವಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಇದೀಗ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!