ಉದಯವಾಹಿನಿ, ಹೊಸಪೇಟೆ : ಭಾರತದ ಭವ್ಯ ಪರಂಪರೆಯ ಹೆಮ್ಮೆಯ ದ್ಯೋತಕ, ವಿಶ್ವಪರಂಪರೆ ತಾಣ ಹಂಪಿಯ ಪರಿಸರ ಮೂರು ದಿನಗಳ ಉತ್ಸವಕ್ಕೆ ಸಜ್ಜಾಗಿದೆ. ಫೆ.13ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ , ವಿಜಯನಗರ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಸರ್ಕಾರದ ಸಚಿವರುಗಳು, ಶಾಸಕರುಗಳು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕಲೆ, ಸಾಹಿತ್ಯ, ಸಂಗೀತ ಸಂಗಮವಾಗಿದ್ದ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸ್ಮರಿಸಿಕೊಳ್ಳುವ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜತನದಿಂದ ಮುಂದುವರಿಸುವ ಉದ್ದೇಶದಿಂದ ಜರುಗುತ್ತಿರುವ ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಉತ್ಸವದ ಯಶಸ್ವಿಗಾಗಿ ವಿಜಯನಗರ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದು, ಹಂಪಿಯ ಪರಿಸರದಲ್ಲೀಗ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ ಮೇಳೈಸಿದೆ.
6 ವೇದಿಕೆಗಳ ನಿರ್ಮಾಣ: ಉತ್ಸವದ ಕಾರ್ಯಕ್ರಮಗಳಿಗಾಗಿ ಆರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯವೇದಿಕೆಗೆ ಹಂಪಿ ಉತ್ಸವದ ರೂವಾರಿ ದಿ.ಎಂ.ಪಿ. ಪ್ರಕಾಶ್ ವೇದಿಕೆ ಎಂದು ಹೆಸರಿಡಲಾಗಿದೆ. ಎದುರು ಬಸವಣ್ಣ ಬಳಿ ಶ್ರೀಕೃಷ್ಣದೇವರಾಯ ವೇದಿಕೆ, ವಿರುಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ವಿರೂಪಾಕ್ಷೇಶ್ವರ ವೇದಿಕೆ, ಸಾಸಿವೆಕಾಳು ಗಣಪ ವೇದಿಕೆ, ಮಹಾನವಮಿ ದಿಬ್ಬದ ಬಳಿ ವಿದ್ಯಾರಣ್ಯ ವೇದಿಕೆ, ಆನೆಲಾಯ ಬಳಿ ಹಕ್ಕಬುಕ್ಕ ವೇದಿಕೆಗಳನ್ನು ನಿರ್ಮಿಸಲಾಗಿದೆ. ವಿರುಪಾಕ್ಷೇಶ್ವರ ವೇದಿಕೆಯಲ್ಲಿ ಸಾಹಿತ್ಯ ಗೋಷ್ಠಿಗಳು ನಡೆಯಲಿದ್ದು ಉಳಿದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಉತ್ಸವದ ಹಿನ್ನೆಲೆಯಲ್ಲಿ ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ತುಂಗಾ ಆರತಿ, ಬೈಕ್ ರ್‍ಯಾಲಿ ನಡೆದಿದ್ದು, ಗುರುವಾರದಂದು ವಿಜಯನಗರ ವಸಂತ ವೈಭವ, ಹಂಪಿ ಬೈ ಸ್ಕೈಗೆ ಚಾಲನೆ ಸಿಕ್ಕಿದೆ. ಉತ್ಸವದಲ್ಲಿ ಗಾಳಿಪಟ ಪ್ರದರ್ಶನ, ಎತ್ತುಗಳ ಪ್ರದರ್ಶನ, ಆಹಾರಮೇಳ, ಗ್ರಾಮೀಣ ಕ್ರೀಡೆಗಳು, ಬೋಟಿಂಗ್, ಫಲಪುಷ್ಪ ಪ್ರದರ್ಶನ, ಡ್ರೋಣ್ ಪ್ರದರ್ಶನ, ಜಾನಪದ ವಾಹಿನಿ, ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು, ವಿಚಾರಸಂಕಿರಣ, ಯುವಗೋಷ್ಠಿ, ಕವಿಗೋಷ್ಠಿ, ಮಹಿಳಾ ಗೋಷ್ಠಿಗಳು ಜರುಗಲಿವೆ.
