ಉದಯವಾಹಿನಿ,ಅಜೆರ್ಬೈಜಾನ್ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಲು ‘ಕತ್ತೆ ಮಾರ್ಗ’ದ ಮೊರೆ ಹೋಗಿದ್ದ ಗುಜರಾತ್‌ನ( ಆನಂದ್ ) ಜಿಲ್ಲೆಯ ಇಬ್ಬರು, ಅಜೆರ್ಬೈಜಾನ್‌ನಲ್ಲಿ ಅಪಹರಣಕ್ಕೊಳಗಾಗಿ ನರಕಯಾತನೆ ಅನುಭವಿಸಿ, ಕೊನೆಗೆ ಭಾರತ ಸರ್ಕಾರದ ರಾಜತಾಂತ್ರಿಕ ಹಸ್ತಕ್ಷೇಪದಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಧ್ರುವ್ ಪಟೇಲ್ (22) ಮತ್ತು ದೀಪಿಕಾ ಪಟೇಲ್ (32) ಎಂಬುವವರೇ ರಕ್ಷಿಸಲ್ಪಟ್ಟವರು. ಇವರು ಅಜೆರ್ಬೈಜಾನ್ ರಾಜಧಾನಿ ಬಾಕು ನಗರದಲ್ಲಿ ಅಪಹರಣಕ್ಕೊಳಗಾಗಿದ್ದರು. ಇವರನ್ನು ಬಿಡುಗಡೆ ಮಾಡಲು ಕಿಡ್ನಾಪರ್ಸ್ ಹಣಕ್ಕಾಗಿ ಬೇಡಿಕೆಯಿಟ್ಟು, ಚಿತ್ರಹಿಂಸೆ ನೀಡಿದ್ದಲ್ಲದೆ, ಇವರ ಕಿಡ್ನಿಗಳನ್ನು ಕಿತ್ತು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಮುಂಬೈ ಮೂಲದ ಏಜೆಂಟರ ಮಾತು ನಂಬಿ ಈ ಇಬ್ಬರು ಜನವರಿ 30ರಂದು ಅಕ್ರಮ ಹಾದಿಯ ಮೂಲಕ ಅಮೆರಿಕ ತಲುಪಲು ಭಾರತವನ್ನು ತೊರೆದಿದ್ದರು. ಫೆಬ್ರವರಿ 1ರಂದು ಅಜೆರ್ಬೈಜಾನ್ ತಲುಪಿದ ತಕ್ಷಣ, ಅಪರಿಚಿತ ಗ್ಯಾಂಗ್ ಇವರನ್ನು ಅಪಹರಿಸಿ ಪಾಳುಬಿದ್ದ ಮನೆಯೊಂದರಲ್ಲಿ ಬಂಧಿಸಿಟ್ಟಿತು. ಇವರನ್ನು ಅಮೆರಿಕಕ್ಕೆ ಕಳುಹಿಸುವ ಬದಲು, ಒತ್ತೆಯಾಳನ್ನಾಗಿ ಇರಿಸಿಕೊಳ್ಳಲಾಯಿತು.
ಅಪಹರಣಕಾರರು ವಾಟ್ಸಾಪ್ ವಿಡಿಯೊ ಕಾಲ್ ಮೂಲಕ ಗುಜರಾತ್‌ನಲ್ಲಿರುವ ಇವರ ಕುಟುಂಬದವರನ್ನು ಸಂಪರ್ಕಿಸಿದ್ದರು. ವಿಡಿಯೊ ಕಾಲ್‌ನಲ್ಲೇ ಧ್ರುವ್‌ನನ್ನು ಮನಬಂದಂತೆ ಹೊಡೆದು, ಅವರ ಕಿಡ್ನಿಗಳನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡುವುದಾಗಿ ಹೆದರಿಸಿದ್ದರು. ಕುಟುಂಬದವರು ಈಗಾಗಲೇ ನಗದು ಮತ್ತು ಕ್ರಿಪ್ಟೋಕರೆನ್ಸಿ ಮೂಲಕ 65 ಲಕ್ಷ ರುಪಾಯಿ ನೀಡಿದ್ದರೂ, ಕಿಡ್ನಾಪರ್ಸ್ ಬೇಡಿಕೆ ಮಾತ್ರ ಮುಗಿದಿರಲಿಲ್ಲ.
