ಉದಯವಾಹಿನಿ, ಬಳ್ಳಾರಿ, : ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಾದ್ಯಂತ ಒಟ್ಟು 12 ಜಿಲ್ಲೆಗಳನ್ನು ಒಳಗೊಂಡ ಮೂರು ಮಲ್ಟಿಟ್ರ‍್ಯಾಕ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಕೇಂದ್ರ ಸಚಿವ ಸಂಪುಟ ಸಮಿತಿಯು ಕೇಂದ್ರ ರೈಲ್ವೆ ಸಚಿವಾಲಯದ ಮೂರು ಯೋಜನೆಗಳನ್ನು ಒಟ್ಟು 18,509 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಅನುಮೋದಿಸಿದೆ.
ಕಸಾರಾ-ಮನ್ಮಾಡ್ 3ನೇ ಮತ್ತು 4ನೇ ಮಾರ್ಗ, ದೆಹಲಿ-ಅಂಬಾಲ 3ನೇ ಮತ್ತು 4ನೇ ಮಾರ್ಗ, ಬಳ್ಳಾರಿ – ಹೊಸಪೇಟೆ 3ನೇ ಮತ್ತು 4ನೇ ಮಾರ್ಗಕ್ಕೆ ಅನುಮೋದನೆ ಸಿಕ್ಕಿದೆ. ಬಳ್ಳಾರಿ ಹೊಸಪೇಟೆ ನಾಲ್ಕನೇ ಮಾರ್ಗಕ್ಕೆ ಅಂದಾಜು 2,372 ಕೋಟಿ ರೂ. ವೆಚ್ಚ ಆಗಲಿದೆ.
ಕರ್ನಾಟಕಕ್ಕೆ ವಿಶೇಷ ಪ್ರಯೋಜನಗಳು: ಬಳ್ಳಾರಿ-ಹೊಸಪೇಟೆ ಮೂರನೇ ಮತ್ತು ನಾಲ್ಕನೇ ಮಾರ್ಗ ಯೋಜನೆಯು ರಾಜ್ಯದ ಉಕ್ಕು ಮತ್ತು ಗಣಿಗಾರಿಕಾ ಕೇಂದ್ರವಾದ ಬಳ್ಳಾರಿ ಪ್ರದೇಶದಲ್ಲಿ ದಟ್ಟಣೆಯನ್ನು ನಿವಾರಿಸಿ, ಸರಕು ಸಾಗಣೆಯನ್ನು ಸುಗಮಗೊಳಿಸಲಿದೆ. ಈ ಯೋಜನೆಯು ಹೊಸಪೇಟೆಯಿಂದ ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಅಭಯಾರಣ್ಯ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ ಮತ್ತು ವಿಜಯ ವಿಠ್ಠಲ ದೇವಾಲಯ ಮುಂತಾದ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ. ಈ ಯೋಜನೆಯಿಂದ ಸುಮಾರು 3,902 ಹಳ್ಳಿಗಳು (ಸುಮಾರು 97 ಲಕ್ಷ ಜನಸಂಖ್ಯೆ) ಹೆಚ್ಚುವರಿ ಸಂಪರ್ಕ ಪಡೆಯಲಿವೆ. ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಸುಣ್ಣದ ಕಲ್ಲು, ಕಂಟೇನರ್, ಆಹಾರ ಧಾನ್ಯಗಳು, ಸಕ್ಕರೆ, ರಸಗೊಬ್ಬರಗಳು ಮುಂತಾದ ಸರಕುಗಳ ಸಾಗಣೆಗೆ ದೊಡ್ಡಮಟ್ಟದ ಸಾಮರ್ಥ್ಯ ಹೆಚ್ಚಳವಾಗಲಿದೆ. ಒಟ್ಟು ಯೋಜನೆಗಳಿಂದ ವರ್ಷಕ್ಕೆ 96 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದೆ. ಪರಿಸರದ ದೃಷ್ಟಿಯಿಂದಲೂ ಈ ಯೋಜನೆಗಳು ಮಹತ್ವದ್ದು. ರೈಲ್ವೆಯು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿರುವುದರಿಂದ, ತೈಲ ಆಮದು ಸುಮಾರು 22 ಕೋಟಿ ಲೀಟರ್ ಕಡಿಮೆಯಾಗಲಿದ್ದು, CO₂ ಹೊರಸೂಸುವಿಕೆಯು 111 ಕೋಟಿ ಕೆ.ಜಿ. ಕಡಿಮೆಯಾಗಿ, ಇದು 4 ಕೋಟಿ ಮರಗಳನ್ನು ನೆಟ್ಟಷ್ಟು ಪರಿಣಾಮ ಬೀರುತ್ತದೆ. ಇದರಿಂದ ದೇಶದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಿ, ಆರ್ಥಿಕತೆಗೆ ಉತ್ತೇಜನ ಸಿಗಲಿದೆ.
