ಉದಯವಾಹಿನಿ, ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಖ್ಯಾತಿಯ ಶ್ರೀಭೋಗನಂಧೀಶ್ವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ಮಹಾಶಿವರಾತ್ರಿ ಅವಧಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಂದಿಗ್ರಾಮವು ವಾರದಿಂದಲೇ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿರುವ ಶ್ರೀಭೋಗನಂದೀಶ್ವರ ಗಣಪತಿ ಉಮಾಮಹೇಶ್ವರಿ ಅಮ್ಮನವರ ಜೋಡಿ ಕಲ್ಲಿನ ರಥೋತ್ಸವಕ್ಕೆ ಸಿದ್ದತೆಗಳು ಜೋರಾಗಿ ಸಾಗಿದ್ದು ದಿನಗಣಣೆ ಆರಂಭವಾಗಿದ್ದು ರಥಗಳ ಅಲಂಕಾರ, ದನಗಳ ಪರಿಷೆಗೆ ಸಿದ್ಧತೆ ಜೋರಾಗಿ ನಡೆದಿದೆ.
ಮಹಾಶಿವರಾತ್ರಿ ಮಾರನೆಯ ದಿನ ನಡೆಯುವ ಜೋಡಿ ಕಲ್ಲಿನ ರಥೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ತಮಿಳುನಾಡು, ಆಂದ್ರಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಯಲ್ಲಿ ಜಾತ್ರಾ ಮಹೋತ್ಸವವು ಐತಿಹಾಸಿಕವಾಗಿ ಧಾರ್ಮಿಕವಾಗಿ ಪೌರಾಣಿಕವಾಗಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಶ್ರೀಭೋಗನಂದೀಶ್ವರನ ಸನ್ನಿಧಿಯಲ್ಲಿ ೨೦೨೫ರ ತನಕ ಜೋಡಿ ಕಲ್ಲಿನ ಬ್ರಹ್ಮರಥೋತ್ಸವ ನಡೆಯುತ್ತಿತ್ತು. 2022ರಲ್ಲಿ ನಡೆದ ಬ್ರಹ್ಮರಥೊತ್ಸವದ ಸಂದರ್ಭದಲ್ಲಿ ಅಂದಿನ ಸಚಿವ ಡಾ.ಕೆ.ಸುಧಾಕರ್ ರಥಕ್ಕೆ ಪೂಜೆ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಕಲ್ಲಿನ ರಥದ ಅಚ್ಚು ಮುರಿ ದಿತ್ತು.ಈ ಸಂದರ್ಭದಲ್ಲಿ ಜೋಡಿ ರಥೋತ್ಸವದ ಬದಲಿಗೆ ಒಂಟಿ ರಥವನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ್ದು ನಡೆದು ಸಾಕಷ್ಟು ಚರ್ಚೆಗಳಿಗೆ ಅವಕಾಶ ನೀಡಿತ್ತು.
2025ರಲ್ಲಿ ಹುರುಳುಗುರ್ಕಿ ವೆಂಕಟೇಗೌಡ ಎಂಬ ಉದ್ಯಮಿ 2.5 ಕೋಟಿ ವೆಚ್ಚದಲ್ಲಿ ಉಡುಪಿಯ ಅಷ್ಟಮಠಗಳ ರಥದ ಮಾದರಿಯಲ್ಲಿ ನೂತನ ರಥವನ್ನು ದೇವಾಲಯಕ್ಕೆ ಮಾಡಿಸಿಕೊಟ್ಟಿದ್ದಾರೆ. 54 ಅಡಿ ಎತ್ತರವಿರುವ ಈ ರಥವೇ ಇದು ಪ್ರಧಾನ ರಥವೆನಿಸಿದ್ದು ಇದರಲ್ಲಿಯೇ ಶ್ರೀಭೋಗ ನಂದೀಶ್ವರಸ್ವಾಮಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಆಗಲಿದೆ.
