ಉದಯವಾಹಿನಿ, ಉತ್ತರಾಖಂಡ: ವಿಶ್ವಪ್ರಸಿದ್ಧ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ಧಿಕಲಾದಲ್ಲಿ, ರಾಮನಗರ ಅರಣ್ಯ ವಿಭಾಗದ ಸೀತಾವಾಣಿ ಮತ್ತು ರಿಂಗೋರಾ ಪ್ರದೇಶದಲ್ಲಿ ಅಪರೂಪದ ಸ್ಪಾಟ್ – ಬೆಲ್ಲಿಡ್ ಈಗಲ್ ಗೂಬೆ ಕಾಣಿಸಿಕೊಂಡಿದೆ. ಅಪರೂಪದ ಪಕ್ಷಿಯನ್ನು ಕಂಡು ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿಪ್ರಿಯರ ಉತ್ಸಾಹ ಇಮ್ಮಡಿಯಾಗಿದೆ.ವನ್ಯಜೀವಿ ಉತ್ಸಾಹಿ ದೀಪ್ ರಾಜ್ವರ್ ಅವರು ಸ್ಪಾಟ್ – ಬೆಲ್ಲಿಡ್ – ಈಗಲ್ ಗೂಬೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ತಜ್ಞರ ಪ್ರಕಾರ, ಈ ಪಕ್ಷಿಯ ಬೃಹತ್ ಗಾತ್ರ, ಬೆಂಕಿಯುಗುಳುವ ಕಿತ್ತಳೆ ಕಣ್ಣುಗಳು ಮತ್ತು ರಾತ್ರಿಯ ಮೌನವನ್ನೂ ಭೇದಿಸುವಂತಹ ಅದರ ಭಯಾನಕ ಕೂಗು ಇದಕ್ಕೆ ‘ಕಾಡಿನ ಭೂತ’ ಮತ್ತು ‘ಕಾಡಿನ ಮಾಟಗಾತಿ’ ಎಂಬ ಹೆಸರುಗಳನ್ನು ನೀಡಿದೆ. ಸರಿಸುಮಾರು 20 ರಿಂದ 25 ಇಂಚು ಉದ್ದ ಮತ್ತು ಸುಮಾರು 2 ಕೆ.ಜಿ.ಯಷ್ಟು ತೂಕವಿರುವ ಈ ಶಕ್ತಿಶಾಲಿ ಪರಭಕ್ಷಕ ಗೂಬೆ ಸಾಮಾನ್ಯವಾಗಿ ಭಾರತ ಮತ್ತು ಆಗ್ನೇಯ ಏಷ್ಯಾದ ದಟ್ಟ ಕಾಡುಗಳಲ್ಲಿ ಕಂಡು ಬರುತ್ತದೆ.
ಕಾಡಿನ ಮಾಟಗಾತಿಯ ಮುಖ್ಯ ಆಹಾರವೇನು ಗೊತ್ತಾ?: ವನ್ಯಜೀವಿ ಉತ್ಸಾಹಿ ದೀಪ್ ರಾಜ್ವರ್ ಅವರು ಹೇಳುವಂತೆ, ಸ್ಪಾಟ್ – ಬೆಲ್ಲಿಡ್ ಈಗಲ್ – ಗೂಬೆ ವಿರಳವಾಗಿ ಕಂಡುಬರುತ್ತದೆ ಮತ್ತು ಇದು ಬಹಳ ಅಪರೂಪದ ಜಾತಿಯ ಪಕ್ಷಿ. ಇದು ರಾತ್ರಿ ಪಕ್ಷಿ. ಇದು ಹಗಲಿನಲ್ಲಿ ದಟ್ಟವಾದ ಮರಗಳಲ್ಲಿ ಶಾಂತವಾಗಿ ಕುಳಿತು ರಾತ್ರಿಯಲ್ಲಿ ಬೇಟೆ ಹುಡುಕುತ್ತಾ ಹೊರಗೆ ಹೋಗುತ್ತದೆ. ನವಿಲು ಮರಿಗಳು, ಮೊಲಗಳು, ಹಲ್ಲಿಗಳು ಮತ್ತು ಇತರ ಸಣ್ಣ ಜೀವಿಗಳು ಇದರ ಪ್ರಮುಖ ಆಹಾರ.
ಸ್ಪಾಟ್-ಬೆಲ್ಲಿಡ್ ಈಗಲ್-ಗೂಬೆಯನ್ನು ನೋಡಿ ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ಒಂದು ಸೌಭಾಗ್ಯ. ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಈ ಪಕ್ಷಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಅವಕಾಶ ನನಗೆ ಸಿಕ್ಕಿತು. ಮೊದಲ ಬಾರಿಗೆ ಧಿಕಲಾ ಪ್ರದೇಶದಲ್ಲಿ, ಎರಡನೇ ಬಾರಿಗೆ ಸೀತಾವಾಣಿಯಲ್ಲಿ ಮತ್ತು ಇತ್ತೀಚೆಗೆ ರಿಂಗೋಡಾ ಪ್ರದೇಶದಲ್ಲಿ ಅದರ ಫೋಟೋ ಕ್ಲಿಕ್ಕಿಸಿದ್ದೇನೆ ಎಂದು ಹೇಳಿದರು.
ಇವುಗಳಿಗಿದೆ ಆಸಕ್ತಿದಾಯಕ ಜಾನಪದ ಕಥೆ: ಕಾರ್ಬೆಟ್ ಪ್ರದೇಶದಲ್ಲಿ ಸ್ಪಾಟ್-ಬೆಲ್ಲಿಡ್ ಈಗಲ್-ಗೂಬೆ ಇರುವುದು ಅದರ ಶ್ರೀಮಂತ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ. ಈ ಗೂಬೆಯೊಂದಿಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಜಾನಪದ ಕಥೆಗಳಿವೆ. ದಶಕಗಳ ಹಿಂದೆ, ಗ್ರಾಮಸ್ಥರಿಗೆ ಅದರ ನಿಜವಾದ ಗುರುತು ತಿಳಿದಿರದಿದ್ದಾಗ, ರಾತ್ರಿ ವೇಳೆ ಅದರ ಕೂಗು ಜನರಿಗೆ ಭಯ ಉಂಟುಮಾಡುತ್ತಿತ್ತು. ಹಲವು ವನ್ಯಜೀವಿ ಪುಸ್ತಕಗಳು ಇದರ ಕೂಗು ಮಹಿಳೆಯ ಅಳು ಅಥವಾ ಕಿರುಚಾಟವನ್ನು ಹೋಲುತ್ತದೆ ಎಂದು ವಿವರಿಸುತ್ತವೆ.
