ಉದಯವಾಹಿನಿ, ಅಹಮದಾಬಾದ್: ಅಹಮದಾಬಾದ್​ ಏರ್​ ಇಂಡಿಯಾ ದುರಂತಕ್ಕೆ ನಿಖರ ಕಾರಣ ತಿಳಿಯುವವರೆಗೆ, ಯಾರೂ ಕಂಪನಿ ಮತ್ತು ಸರ್ಕಾರ ನೀಡುವ ಅಂತಿಮ ಪರಿಹಾರವನ್ನು ಈಗಲೇ ತೆಗೆದುಕೊಳ್ಳಬೇಡಿ ಎಂದು ಅವರ ಪರ ವಕೀಲರು ಸಲಹೆ ನೀಡಿದ್ದಾರೆ.
105ಕ್ಕೂ ಹೆಚ್ಚು ಕುಟುಂಬಗಳನ್ನು ಪ್ರತಿನಿಧಿಸುವ ವಕೀಲರಾದ ಚಕ್ ಎನ್ ಚಿಯೋನುಮಾ ಅವರು, ಏರ್ ಇಂಡಿಯಾ ನೀಡುವ ಪ್ರಸ್ತಾವಿತ ಅಂತಿಮ ಪರಿಹಾರವನ್ನು ಒಪ್ಪಬೇಡಿ. ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಮೊದಲು ತನಿಖೆಯ ವರದಿಗಾಗಿ ಕಾಯಿರಿ ಎಂದಿದ್ದಾರೆ.
ಎಎನ್​​ಐ ಮಾಧ್ಯಮದ ಜೊತೆ ಮಾತನಾಡಿರುವ ಅವರು, ಏರ್​ ಇಂಡಿಯಾ ನೀಡುವ ಪರಿಹಾರವನ್ನು ಪಡೆಯುವ ಮೊದಲು, ದುರಂತಕ್ಕೆ ಕಾರಣವೇನು, ಯಾರಿಗೆ ಎಷ್ಟೆಲ್ಲಾ ಹಾನಿಯಾಗಿದೆ ಎಂಬುದು ಬಹಿರಂಗವಾಗುವುದು ಮುಖ್ಯ. ಹೀಗಾಗಿ, ‘ಇತ್ಯರ್ಥ’ ಪರಿಹಾರ ಪಡೆಯುವ ಮೊದಲು ಯೋಚಿಸಿ ಎಂದು ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.
ತನಿಖೆ ಪೂರ್ಣಗೊಳ್ಳಲು ಕಾಯಿರಿ: ತನಿಖೆ ಪೂರ್ಣಗೊಳ್ಳುವ ಮೊದಲು ಪರಿಹಾರಕ್ಕೆ ಒಪ್ಪಿಗೆ ಸೂಚಿಸುವುದು ಅನ್ಯಾಯ ಎಂದು ಅಭಿಪ್ರಾಯಪಟ್ಟ ಚಿಯೋನುಮಾ, ಕೆಲವು ಕುಟುಂಬಗಳು ಈಗಾಗಲೇ ಪ್ರಸ್ತಾವಿತ ಪರಿಹಾರವನ್ನು ನಿಯಮಗಳನ್ನು ಒಪ್ಪಿವೆ. ಆದರೆ, ಅವುಗಳನ್ನು ಮರುಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದರು.
ಏರ್ ಇಂಡಿಯಾ ಪ್ರಸ್ತಾಪಿಸಿದ ಸೆಟಲ್​​ಮೆಂಟ್​ ಸಮಸ್ಯಾತ್ಮಕವಾಗಿದೆ. ಇದು ಕುಟುಂಬ ಸದಸ್ಯರ ಮರಣಕ್ಕೆ ನೀಡುವ ಪರಿಹಾರ ಮತ್ತು ಭವಿಷ್ಯದಲ್ಲಿ ಕಂಪನಿಯು ಈ ದುರಂತದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಿದೆ. ಇದರ ಜೊತೆಗೆ, ವಿಮಾನಯಾನ ತಯಾರಕರು, ಘಟಕ ತಯಾರಕರು, ವಾಯುಯಾನ ನಿರ್ವಾಹಕರು ಮತ್ತು ಸರ್ಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲರೂ ಆರೋಪ ಮುಕ್ತರಾಗಲಿದ್ದಾರೆ. ಪರಿಹಾರವು, ದುರಂತಕ್ಕಿಂತ ದೊಡ್ಡದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ತನಿಖೆ ಮುಗಿಯುವ ಮೊದಲು ಪರಿಹಾರ ಘೋಷಣೆ: ಅಹಮದಾಬಾದ್‌ನಲ್ಲಿ ಸಂಭವಿಸಿದ AI-171 ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಅಂತಿಮ ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಾಗಿ ಏರ್ ಇಂಡಿಯಾ ಗುರುವಾರ ಘೋಷಿಸಿತು. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದು, ನಾವು ನೀಡುವ ಪರಿಹಾರಕ್ಕೆ ಸಮನಲ್ಲ. ಆದರೆ, ಅವರ ನೋವಿನಲ್ಲಿ ಜೊತೆಯಾಗಿರುವುದು ನಮ್ಮ ಉದ್ದೇಶ ಎಂದು ಹೇಳಿದೆ.
ಮೃತರ ಕುಟುಂಬಗಳಿಗೆ ಈಗಾಗಲೇ 25 ಲಕ್ಷ ರೂ.ಗಳ ಆರಂಭಿಕ ಮಧ್ಯಂತರ ಪಾವತಿಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ, ಟಾಟಾ ಗ್ರೂಪ್ ಸ್ಥಾಪಿಸಿದ Al-171 ಸ್ಮಾರಕ ಮತ್ತು ಕಲ್ಯಾಣ ಟ್ರಸ್ಟ್ ಮೂಲಕ ಆಯಾ ಕುಟುಂಬಗಳಿಗೆ 1 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ನೀಡಲಾಗುವುದು ಎಂದು ತಿಳಿಸಿದೆ.
2025ರ ಜೂನ್ 12 ರಂದು ಏರ್ ಇಂಡಿಯಾದ AI-171 ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ 229 ಪ್ರಯಾಣಿಕರು, 12 ಸಿಬ್ಬಂದಿ ಮತ್ತು ಇತರ 19 ಮಂದಿ ಸೇರಿದಂತೆ 260 ಜನರು ದುರ್ಮರಣಕ್ಕೀಡಾಗಿದ್ದರು.

Leave a Reply

Your email address will not be published. Required fields are marked *

error: Content is protected !!