ಉದಯವಾಹಿನಿ, ಲುಧಿಯಾನ (ಪಂಜಾಬ್): ನವಜಾತ ಶಿಶು ಮಾರಾಟ ಮತ್ತು ಖರೀದಿಗೆ ಬಂದಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಎಂಟು ಜನರ ವಿರುದ್ಧ ದೂರು ದಾಖಲಾಗಿದ್ದು, ಈ ಪೈಕಿ ಮಗುವಿನ ತಾಯಿ, ಆಶಾ ಕಾರ್ಯಕರ್ತೆ ಮತ್ತು ಮಗು ಖರೀದಿಸಿದ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಲುಧಿಯಾನದ ಶೇರ್‌ಪುರ್ ಕಲಾನ್ ನಿವಾಸಿಯಾದ ವಲಸೆ ಮಹಿಳೆಯೊಬ್ಬರು (ಮೂಲತಃ ಉತ್ತರ ಪ್ರದೇಶದವರು) ಫೆಬ್ರವರಿ 13, 2026 ರಂದು ಲುಧಿಯಾನದ ಅರೋರಾ ನರ್ಸಿಂಗ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಮಗುವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸದ ಮಹಿಳೆ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆಶಾ ಎಂಬ ಮಹಿಳೆಯನ್ನು ಸಂಪರ್ಕಿಸಿ, ನನಗೆ ಈ ಮಗು ಬೇಡ, ಮಾರುವಂತೆ ಕೇಳಿಕೊಂಡಿದ್ದಾಳೆ. ಆಶಾಳು ನೇರವಾಗಿ ಡಾ. ಮನ್ಮೀತ್ ಕೌರ್ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದ್ದಾಳೆ. ಡಾ. ಕೌರ್ ತಮ್ಮ ತಾಯಿಯನ್ನು ಸಂಪರ್ಕಿಸಿ ಕೊನೆಗೆ ಮಕ್ಕಳಿಲ್ಲದ ಕೌರ್ ಎಂಬ ಮಹಿಳೆಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದಾರೆ. 2 ಲಕ್ಷ 10 ಸಾವಿರ ರೂ.ಗಳಿಗೆ ಒಪ್ಪಂದ ಕೂಡ ಮಾಡಿಕೊಂಡಿದ್ದಾರೆ. ಮಗುವನ್ನು ಖರೀದಿಸಿದ ಮಹಿಳೆ ಆನ್‌ಲೈನ್‌ನಲ್ಲಿ ಹಣ ಸಹ ವರ್ಗಾಯಿಸಿದ್ದರು. ಈ ವಿಚಾರ ಗೊತ್ತಾಗಿ ಪ್ರಕರಣದ ತನಿಖೆಗೆ ಮುಂದಾಗಲಾಗಿತ್ತು. ಒಟ್ಟು 8 ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದ್ದು, 5 ಜನರನ್ನು ಬಂಧಿಸಲಾಗಿದೆ ಮತ್ತು 3 ಜನರ ಹುಡುಕಾಟ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!