ಉದಯವಾಹಿನಿ, ನೆಲ್ಲೂರು(ಆಂಧ್ರ ಪ್ರದೇಶ): ಸಾಧಿಸುವ ದೃಢ ನಿಶ್ಚಯವಿದ್ದರೆ ವಯಸ್ಸು ಅಡ್ಡಿಯಾಗದು. ಅದಕ್ಕೊಂದು ಲೇಟೆಸ್ಟ್ ಉದಾಹರಣೆ 78 ವರ್ಷದ ರಾಮ ಸುಬ್ಬಮ್ಮ. ಇಳಿ ವಯಸ್ಸಲ್ಲಿಯೂ ಜೀವನದಲ್ಲಿ ಗೆಲ್ಲುವ ಬಯಕೆ ಮುಖ್ಯ ಎಂದು ಸಾಬೀತುಪಡಿಸಿರುವ ಇವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ರಾಮ ಸುಬ್ಬಮ್ಮ, ಒಮ್ಮೆ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ವೀಕ್ಷಿಸಿ, ಅದರಿಂದ ಆಕರ್ಷಿತರಾದರು. ಅದೇ ಆಸಕ್ತಿ ಇಂದು ಅವರ ಗೆಲುವಿಗೆ ಕಾರಣವಾಗಿದೆ. ಕ್ರೀಡಾ ರಂಗದಲ್ಲಿ ಅವರು ಮಾಡಿರುವ ಸಾಧನೆ ಮೆಚ್ಚುಗೆ ಗಳಿಸುತ್ತಿದೆ.

ಅಥ್ಲೆಟಿಕ್ಸ್‌ನಲ್ಲಿ ಒಲವು ಮಾತ್ರ ಮೂಡದೆ ಅದರಲ್ಲಿ ಸಾಧಿಸುವ ಛಲ ಕೂಡ ರಾಮಸುಬ್ಬಮ್ಮನವರಿಗೆ ಮೂಡಿತು. ಇದರ ಪ್ರತಿಫಲವಾಗಿ 2016ರಿಂದ ಸಕ್ರಿಯವಾಗಿ 500 ಮೀಟರ್​, 800 ಮೀಟರ್​ ಓಟದಲ್ಲಿ ಭಾಗಿಯಾಗುತ್ತಿದ್ದಾರೆ. 3000 ಮೀಟರ್​ ನಡಿಗೆ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದಾರೆ. ಕ್ರೀಡೆಯಲ್ಲಿ ಬೆಳೆಸಿಕೊಂಡ ಆಸಕ್ತಿ, ಅದರರೆಡೆಗಿನ ಸಮರ್ಪಣಾ ಭಾವದಿಂದಾಗಿಯೇ ಅವರು ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗೆಲುವು ಕಂಡಿದ್ದಾರೆ. ಇದುವರೆಗೆ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 12 ಚಿನ್ನದ ಪದಕ ಮತ್ತು 8 ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದ್ದಾರೆ.

ರಾಮಸುಬ್ಬಮ್ಮನವರ ಕ್ರೀಡಾ ಮನೋಭಾವ ಅನೇಕರನ್ನು ಅಚ್ಚರಿಗೊಳಿಸಿದೆ. ಆರ್ಥಿಕವಾಗಿ ಬಲಾಢ್ಯರಲ್ಲ, ಹೀಗಿದ್ದರೂ ಅವರ ಕ್ರೀಡಾಪ್ರೇಮ ಕಡಿಮೆಯಾಗಿಲ್ಲ. ಜೀವನೋಪಾಯಕ್ಕಾಗಿ ಪರಿಚಯಸ್ಥರ ಮನೆಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿರುವ ಇವರು, ಆರ್ಥಿಕ ತೊಂದರೆಗಳ ನಡುವೆಯೂ ಕ್ರೀಡೆಗಳ ಮೇಲಿನ ಉತ್ಸಾಹ ಮುಂದುವರೆಸಿದ್ದಾರೆ. ಅಂತಾರಾಷ್ಟ್ರಿಯ ಮಟ್ಟದ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ರಾಮಸುಬ್ಬಮ್ಮ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಸಲಹೆ-ಸೂಚನೆ, ಬೆಂಬಲದ ಬಲದಿಂದ ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವ ಆಶಯ ವ್ಯಕ್ತಪಡಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!