ಉದಯವಾಹಿನಿ, ಪಾಟ್ನಾ(ಬಿಹಾರ): ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಗೆ ಭಾರೀ ಗೆಲುವು ತಂದುಕೊಡಲು ಕಾರಣವಾಗಿದ್ದ ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ಯಡಿ ಮತ್ತೆ 25 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 10 ಸಾವಿರ ರೂಪಾಯಿಗಳನ್ನು ಸಿಎಂ ನಿತೀಶ್​ ಕುಮಾರ್​ ಸರ್ಕಾರ ಇಂದು ವರ್ಗಾಯಿಸಿತು. ಸ್ವಯಂ ಉದ್ಯೋಗ ಮತ್ತು ಜೀವನೋಪಾಯ ಸೃಷ್ಟಿಗೆ ಅವಕಾಶ ನೀಡುವ ಮೂಲಕ ಮಹಿಳಾ ಸಬಲೀಕರಣ ಗುರಿ ಹೊಂದಿರುವ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2025ರ ಸೆಪ್ಟೆಂಬರ್​​ನಲ್ಲಿ ಆರಂಭಿಸಿದ್ದರು.

ಅದರಂತೆ, ಸಿಎಂ ನಿತೀಶ್​ ಕುಮಾರ್​ ಸೋಮವಾರ ತಮ್ಮ ಅಧಿಕೃತ ನಿವಾಸ 1 ಆನ್ ಮಾರ್ಗ್‌ನಲ್ಲಿ ನಡೆದ ಸಮಾರಂಭದಲ್ಲಿ ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಮೂಲಕ ಒಟ್ಟು 2,500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದರು.ಇದುವರೆಗೆ ರಾಜ್ಯದ 1.81 ಕೋಟಿ ಮಹಿಳೆಯರು ತಲಾ 10 ಸಾವಿರ ರೂಪಾಯಿಗಳನ್ನು ಪಡೆದಿದ್ದಾರೆ. ಈ ನೆರವನ್ನು ಉದ್ಯೋಗ ಸ್ಥಾಪಿಸಲು ಬಳಸಿಕೊಂಡು ಯಶಸ್ವಿಯಾದವರಿಗೆ ಶೀಘ್ರದಲ್ಲೇ 2 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ 2 ಲಕ್ಷ ರೂಪಾಯಿಗಳವರೆಗೆ ಹೆಚ್ಚುವರಿ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಇತ್ತೀಚೆಗಷ್ಟೇ ಘೋಷಿಸಿದ್ದರು.

ಏನಿದು ಯೋಜನೆ?: ರಾಜ್ಯದ ಅರ್ಹ ಮಹಿಳೆ ಯಾವುದೇ ಸ್ವಯಂ ಉದ್ಯೋಗ ಆರಂಭಿಸಲು ಬಯಸಿದಲ್ಲಿ ಆಕೆಗೆ ರಾಜ್ಯ ಸರ್ಕಾರದಿಂದ ಆರಂಭದಲ್ಲಿ 10 ಸಾವಿರ ರೂಪಾಯಿ ನೆರವು ನೀಡುತ್ತದೆ. ಆರಂಭಿಸಿದ ಉದ್ಯೋಗ ಯಶಸ್ವಿಯಾಗಿ ಅದನ್ನು ವಿಸ್ತರಿಸಲು ಬಯಸಿದಲ್ಲಿ ಆಕೆಗೆ 2 ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ.

Leave a Reply

Your email address will not be published. Required fields are marked *

error: Content is protected !!