ಉದಯವಾಹಿನಿ, ಕುಲ್ಲು (ಹಿಮಾಚಲ ಪ್ರದೇಶ): 21ನೇ ಶತಮಾನದಲ್ಲಿದ್ದರೂ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಜೊತೆಗೆ ಗಂಡು ಮಗು ಹುಟ್ಟಿದರೆ ಸಂಭ್ರಮಿಸುವವರೇ ಹೆಚ್ಚು. ದೇಶದ ಅನೇಕ ಭಾಗಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವಿನ ತಾರತಮ್ಯ ಇಂದಿಗೂ ಕಂಡುಬರುತ್ತಿದೆ. ಆದರೆ ಈ ಊರಲ್ಲಿ ಹೆಣ್ಣು ಮಗು ಜನಿಸಿದರೆ, ಊರಿಗೇ ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಒಂದಲ್ಲಾ ಮೂರು ದಿನಗಳ ಕಾಲ ಮನೆಯವರೂ ಸೇರಿ ಸಂಬಂಧಿಕರು, ಊರಿನ ಮಂದಿ ಹೆಣ್ಣು ಮಗುವಿನ ಆಗಮನವನ್ನು ಸಂಭ್ರಮಿಸುತ್ತಾರೆ.ಭಾರತದ ಹಲವು ರಾಜ್ಯಗಳಲ್ಲಿ ಗಂಡು ಮಗುವಿನ ಜನನವನ್ನು ಬಹಳ ಸಂತೋಷದಿಂದ ಆಚರಿಸಿದರೆ, ಹೆಣ್ಣು ಮಗುವಿನ ಜನನವನ್ನು ಹೊರೆಯೆಂದೇ ಭಾವಿಸುತ್ತಾರೆ. ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಹೌಲ್​ ಸ್ಪಿತಿಯಲ್ಲಿರುವ ಗಹರ್​ ಕಣಿವೆಯಲ್ಲಿರುವ ಪ್ಯೂಕರ್​ ಎಂಬ ಗ್ರಾಮದಲ್ಲಿ ಈ ವಿಶಿಷ್ಟ ಸಂಪ್ರದಾಯವಿದೆ. ಇಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಶಾಪವಲ್ಲ. ಅದು ದೇವರ ಆಶೀರ್ವಾದವೆಂದು ಪರಿಗಣಿಸಿ ಹಬ್ಬದಂತೆ ಆಚರಿಸಲಾಗುತ್ತದೆ. ಗಂಡು ಮಕ್ಕಳ ಜನನವನ್ನೂ ಆಚರಿಸುತ್ತಾರೆ. ಆದರೆ ಹೆಣ್ಣು ಮಗು ಜನಿಸಿದಾಗ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಗೋಚಿ ಹಬ್ಬ ಎಂದೇ ಕರೆಯಲ್ಪಡುವ ಸಂಭ್ರಮಾಚರಣೆ ಕೆಲವು ವರ್ಷಗಳ ಹಿಂದಿನವೆರೆಗೆ ಸಾಮಾನ್ಯ ಖಾಸಗಿ ಕಾರ್ಯಕ್ರಮವಾಗಿತ್ತು. ಆದರೆ ಈಗ ಇದು ಕೃತಜ್ಞತೆ ಹಾಗೂ ಹೆಮ್ಮೆಯ ಪ್ರತೀಕವಾಗಿ ಬಂಧುಗಳನ್ನು, ಇಡೀ ಗ್ರಾಮಸ್ಥರನ್ನು ಆಹ್ವಾನಿಸಿ ಆಚರಿಸುವ ಹಬ್ಬವಾಗಿ ಬದಲಾಗಿದೆ. ಹಬ್ಬದ ಮೊದಲ ದಿನ ಸ್ಥಳೀಯ ಸಾಂಪ್ರದಾಯಿಕ ಭಕ್ಷ್ಯಗಳ ಜೊತೆಗೆ ಹಾಡುತ್ತಾ, ನೃತ್ಯ ಮಾಡುವ ಮೂಲಕ ತಂಗ್ಜಾರ್​ ದೇವತೆಯನ್ನು ಪೂಜಿಸುತ್ತಾರೆ.

ಎರಡನೇ ದಿನ ಕ್ರೀಡಾ ಆಚರಣೆಯಾಗಿದ್ದು, ಅಲ್ಲಿ ಸಾಂಪ್ರದಾಯಿಕ ಬಿಲ್ಲುಗಾರಿಕೆ ಸ್ಪರ್ಧೆ ನಡೆಯುತ್ತದೆ. ನಂತರ ಲಹೌಲಿ ಜಾನಪದ ನೃತ್ಯಗಳು ಮತ್ತು ಸಮುದಾಯ ಭೋಜನ ಇರುತ್ತದೆ. ನವಜಾತ ಹೆಣ್ಣು ಮಗುವನ್ನು ಗೌರವಿಸುವಂತಹ ಹಾಡುಗಳು, ಆಚರಣೆಗಳು ಮತ್ತು ಆಶೀರ್ವಾದ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ.

Leave a Reply

Your email address will not be published. Required fields are marked *

error: Content is protected !!