ಉದಯವಾಹಿನಿ, ತಿರುವನಂತಪುರಂ(ಕೇರಳ): ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಸಂಚಲನಕಾರಿ ಹೇಳಿಕೆಗಳನ್ನು ನೀಡಿದ್ದು, ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದೆ. I.N.D.I.A ಕೂಟದ ನಾಯಕತ್ವವನ್ನು ಕಾಂಗ್ರೆಸ್ ತೊರೆದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ಗೆ ನೀಡಬೇಕು ಎಂದು ಸಲಹೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಎಎನ್ಐ ಜೊತೆ ಸೋಮವಾರ ಮಾತನಾಡಿರುವ ಮಣಿಶಂಕರ್ ಅಯ್ಯರ್, ವಿಪಕ್ಷಗಳ ಇಂಡಿಯಾ ಕೂಟವನ್ನು ಬಲಪಡಿಸಬೇಕಾದರೆ, ಅದರ ನಾಯಕತ್ವವನ್ನು ಸ್ಟಾಲಿನ್ ಅವರಿಗೆ ನೀಡಬೇಕು. ರಾಷ್ಟ್ರಮಟ್ಟದಲ್ಲಿ ಬಲವಾದ ನಾಯಕತ್ವ ಮತ್ತು ಕಾರ್ಯತಂತ್ರದ ಅಗತ್ಯವಿದೆ ಎಂದರು.
ಸ್ಟಾಲಿನ್ ಘೋಷಣೆಗಳನ್ನು ಕೂಗುವ ಬದಲು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. ರಾಹುಲ್ ಗಾಂಧಿ ಕೇವಲ ಘೋಷಣೆಪ್ರಿಯ. ಇಂಡಿಯಾ ಕೂಟದ ನಾಯಕತ್ವ ಸ್ಟಾಲಿನ್ಗೆ ನೀಡಿದರೆ, ರಾಹುಲ್ ಗಾಂಧಿ ಪ್ರಧಾನಿಯಾಗಲು ಅವರು ಅಡ್ಡಿಯಾಗುವುದಿಲ್ಲ ಎಂದೂ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
‘ವೇಣುಗೋಪಾಲ್ ರೌಡಿ’: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ರೌಡಿ ಎಂದು ಟೀಕಿಸಿದರು. ವೇಣುಗೋಪಾಲ್ ಅವರಂತಹ ರೌಡಿಯನ್ನು ರಾಹುಲ್ ಗಾಂಧಿಯ ಬಳಿ ಇರುವುದು ಪಕ್ಷದ ಸ್ಥಿತಿ ಏನಾಗುತ್ತದೆ ಎಂದು ನೀವು ಊಹಿಸಬಲ್ಲಿರಾ?” ಎಂದು ಅಯ್ಯರ್ ಪ್ರಶ್ನಿಸಿದರು.
ಪವನ್ ಖೇರಾ ಗಿಣಿ ಇದ್ದಂತೆ’: ಹಿರಿಯ ಕಾಂಗ್ರೆಸ್ ತಮ್ಮ ಪಕ್ಷದ ಕೆಲ ಹುಳುಕುಗಳನ್ನು ಎತ್ತಿ ತೋರಿಸಿದ್ದಾರೆ. ಪಕ್ಷದ ರಾಷ್ಟ್ರೀಯ ವಕ್ತಾರರಾಗಿರುವ ಪವನ್ ಖೇರಾ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಪಕ್ಷವು ಪವನ್ ಖೇರಾ ಅವರನ್ನು ವಕ್ತಾರರನ್ನಾಗಿ ಮಾಡಿದ್ದು, ಮೂರ್ಖತನ ನಿರ್ಧಾರ. ಅವರು ವಕ್ತಾರರಲ್ಲ, ಗಿಣಿ ಇದ್ದಂತೆ. ಜೈರಾಮ್ ರಮೇಶ್ ಹೇಳಿದ್ದನ್ನು ಹೇಳುವ ಗಿಣಿ ಎಂದರು.
ಕೇರಳದಲ್ಲಿ ಕಾಂಗ್ರೆಸ್ ಗೆಲ್ಲಲ್ಲ’: ಮುಂಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗೆಲ್ಲಲ್ಲ. ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ಫ್ರಂಟ್ (ಎಲ್‌ಡಿಎಫ್) ಗೆಲ್ಲುತ್ತದೆ ಎಂದು ಅಯ್ಯರ್ ಭವಿಷ್ಯ ನುಡಿದರು.”ನಾನೊಬ್ಬ ಕಾಂಗ್ರೆಸ್ಸಿಗನಾಗಿ, ಯುಡಿಎಫ್ ಅಧಿಕಾರಕ್ಕೆ ಬರಬೇಕೆಂದು ಬಯಸುತ್ತೇನೆ. ಆದರೆ, ಗಾಂಧಿವಾದಿಯಾಗಿ, ಪಿಣರಾಯಿ ಸರ್ಕಾರದ ಅದ್ಭುತ ಸಾಧನೆಗಳ ಹಿನ್ನೆಲೆಯಲ್ಲಿ ಎಡಪಂಥೀಯ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಇದೇ ಸತ್ಯ” ಎಂದು ಅವರು ಹೇಳಿದರು.
“ರಾಹುಲ್ ಗಾಂಧಿ ನಾನೊಬ್ಬ ಪಕ್ಷದ ಸದಸ್ಯ ಎಂಬುದನ್ನು ಮರೆತಿದ್ದಾರೆ. ಆದ್ದರಿಂದ, ನಾನು ಗಾಂಧಿವಾದಿ. ನಾನು ನೆಹರೂವಾದಿ. ನಾನು ರಾಜೀವ್ವಾದಿ, ಆದರೆ ನಾನು ರಾಹುಲಿಯನ್ ಅಲ್ಲ” ಎಂದರು.
