ಉದಯವಾಹಿನಿ, ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದ ರಾಜಕೀಯದಲ್ಲಿ ಐತಿಹಾಸಿಕ ಬದಲಾವಣೆಯಾಗಿದ್ದು, ಬಾಂಗ್ಲಾದೇಶ ನ್ಯಾಷನಲಿಸ್ಟ್​​ ಪಾರ್ಟಿ (ಬಿಎನ್​ಪಿ)ಯ ಮುಖ್ಯಸ್ಥ 60 ವರ್ಷದ ತಾರೀಖ್​ ರೆಹಮಾನ್​ ಅವರು ನೂತನ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.
ಈ ಮೂಲಕ 2024ರಲ್ಲಿ ಶೇಖ್​ ಹಸೀನಾ ಸರ್ಕಾರ ಪತನವಾದ ಬಳಿಕ ಅಸ್ತಿತ್ವಕ್ಕೆ ಬಂದ 18 ತಿಂಗಳ ಮಧ್ಯಂತರ ಸರ್ಕಾರ ಅಂತ್ಯಗೊಂಡಿತು.
ಎರಡು ದಶಕಗಳ ಕಾಲ ಅಧಿಕಾರದಿಂದ ಹೊರಗುಳಿದಿದ್ದ ಬಿಎನ್​ಪಿ, ಇದೀಗ ಮತ್ತೆ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದು, ನೂತನ ಪ್ರಧಾನಿಗೆ ಅಧ್ಯಕ್ಷ ಮೊಹಮ್ಮದ್ ಶಾಹಬುದ್ದಿನ್​ ಸಂಜೆ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿದರು.ಸಾಂಪ್ರದಾಯಿಕ ಬಂಗಭಾಬನ್ ಬದಲಿಗೆ ದೇಶದ ಸಂಸತ್ತಿನ ಕಟ್ಟಡದ ದಕ್ಷಿಣ ಪ್ಲಾಜಾದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಬಿಎನ್​ಪಿ ಕಡೇಯದಾಗಿ 2001ರಿಂದ 2006ರವರೆಗೆ ಅಧಿಕಾರದಲ್ಲಿತ್ತು. ಇದಾದ ಬಳಿಕ ಅಧಿಕಾರದಿಂದ ದೂರ ಸರಿದಿದ್ದ ಪಕ್ಷವು 20 ವರ್ಷದ ಬಳಿಕ ಐತಿಹಾಸಿಕ ಸಾಧನೆ ತೋರಿದೆ. ಹೊಸದಾಗಿ ರಚನೆಯಾದ ಸಚಿವ ಸಂಪುಟ ಹೊಸ ನಾಯಕತ್ವದಿಂದಾಗಿ ಗಮನಾರ್ಹವಾಗಿದೆ.ಪ್ರಧಾನಿ ತಾರೀಖ್ ಜೊತೆಗೆ 17 ಸಚಿವರು ಮತ್ತು 24 ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಈ ಹಿಂದೆ ಕಂಡಿರದ ಹೊಸ ಮುಖಗಳು ಆಡಳಿತದ ಭಾಗವಾಗಿದ್ದಾರೆ.
ನೂತನ ಪ್ರಧಾನಿ ತಾರೀಖ್​ ರೆಹಮಾನ್​ ಕೂಡ ಇದೇ ಮೊದಲ ಬಾರಿಗೆ ಸಂಪುಟ ಸದಸ್ಯರಾಗಿದ್ದಾರೆ. ಈ ಹಿಂದಿನ ಬಿಎನ್​ಪಿ ಅಧಿಕಾರಾವಧಿಯಲ್ಲಿ ಅವರು ಸಾರ್ವಜನಿಕ ಆಡಳಿತದ ಭಾಗವಾಗಿರಲಿಲ್ಲ. 17 ವರ್ಷಗಳ ಕಾಲ ದೇಶದಿಂದ ಹೊರಗುಳಿದು ಅಜ್ಞಾತವಾಸದಲ್ಲಿದ್ದ ತಾರೀಖ್​,​ ಕಳೆದೆರಡು ತಿಂಗಳ ಹಿಂದೆ ದೇಶಕ್ಕೆ ಮರಳಿದ್ದರು.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಓಂ ಬಿರ್ಲಾ ಭಾಗಿ: ಪ್ರಮಾಣ ವಚನ ಕಾರ್ಯಾಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳ ಹಲವಾರು ನಾಯಕರು ಭಾಗಿಯಾಗಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭಾರತದಿಂದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು.

ಪ್ರಮಾಣವಚನದ ಬಳಿಕ ಮಾತನಾಡಿರುವ ಪ್ರಧಾನಿ ರೆಹಮಾನ್, ಸಾಮರಸ್ಯದ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಮತ್ತು ರಾಷ್ಟ್ರೀಯ ಏಕತೆಯನ್ನು ಸ್ಥಾಪಿಸುವ ಸಂದೇಶ ಸಾರಿದರು. ರಾಜಕೀಯ ಮತ್ತು ಆರ್ಥಿಕ ಸ್ಥಿರತೆ, ಕಾನೂನಿನ ಆಡಳಿತ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!