ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳನ್ನು ಪಡೆದುಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪವೀಗ ದೆಹಲಿಯಲ್ಲೂ ಸದ್ದು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಗೌರವ್ ಭಾಟಿಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾಗಿದ್ದ 24 ಜಾಗಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಳಿಗಾಗಿ ಬಳಸಲು ಹೊರಟಿರುವುದು ಏಕೆ? ಈ 24 ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ. ಅವುಗಳ ಮೌಲ್ಯ ಸುಮಾರು 50 ಕೋಟಿ ರೂಪಾಯಿ. ಆದರೆ ಭ್ರಷ್ಟಾಚಾರಕ್ಕೆ ಪ್ರಸಿದ್ಧವಾದ ಕಾಂಗ್ರೆಸ್‌ಗೆ ಅವುಗಳನ್ನು ಕೇವಲ 2 ಕೋಟಿಗೆ ನೀಡಲಾಗಿದೆ. ಇಲ್ಲಿ ಸ್ಪಷ್ಟವಾಗಿ 48 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವರ್ಗಾವಣೆಯ ಉದ್ದೇಶವೇನು? 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವುದೇ? ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮತ್ತು ದೇಶದ ಜನರು ಮಹತ್ವದವರಲ್ಲ. ಕಾಂಗ್ರೆಸ್ ಪಕ್ಷದ ಡಿಎನ್‌ಎಯೇ ಹೀಗಿದೆ . ಅವರು ‘ನಕಲಿ ಗಾಂಧಿ ಕುಟುಂಬ’ವನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಸಾರ್ವಜನಿಕ ಜಮೀನಿಗೆ ಮಾರುಕಟ್ಟೆ ಮೌಲ್ಯವನ್ನು ಸರ್ಕಾರಕ್ಕೆ ನೀಡದೇ ಕಾಂಗ್ರೆಸ್ ಆಸ್ತಿಯನ್ನಾಗಿ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರವಾನಗಿ ಸಿಗುತ್ತದೆಯೇ ಎಂದವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!