ಉದಯವಾಹಿನಿ, ಹೈದರಾಬಾದ್(ತೆಲಂಗಾಣ): ದೇಹದ ಮೇಲೆ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಅನೇಕ ಯುವಕರಿಗೆ ಇತ್ತೀಚೆಗೆ ಫ್ಯಾಷನ್ ಆಗಿದೆ. ಕೈ, ಕಾಲು, ಹೊಟ್ಟೆ, ಎದೆ, ಕುತ್ತಿಗೆ.. ಹೀಗೆ ಎಲ್ಲೆಂದರಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕಣ್ಣುಗಳ ಒಳಗೂ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಫ್ಯಾಷನ್ ಪ್ರಪಂಚದಲ್ಲಿ ಇದೊಂದು ರೀತಿ ಹೊಸ ಟ್ರೆಂಡ್. ಇಂಥ ಕಾಸ್ಮೆಟಿಕ್ ಟ್ಯಾಟೂಗಳು ಬಹಳ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಮೇಕಪ್ ಅಥವಾ ಕಣ್ಣುಗುಡ್ಡೆಯನ್ನು ತಮ್ಮಿಷ್ಟದ ಬಣ್ಣಕ್ಕೆ ಪರಿವರ್ತಿಸಿಕೊಳ್ಳುವ ಹೆಸರಿನಲ್ಲಿ ಕಣ್ಣಿನ ಬಿಳಿ ಭಾಗದಲ್ಲಿ (ಕಣ್ಣುಗುಡ್ಡೆಯ) ಹಚ್ಚೆ ಹಾಕಿಸಿಕೊಳ್ಳುವುದು ಅತಿ ಅಪಾಯಕಾರಿ. ಅಪಾಯಕಾರಿ ಅಷ್ಟೇ ಅಲ್ಲ, ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಂಭವ ಹೆಚ್ಚು. ದೇಹದ ಮೇಲೆ ಗಾಯಗಳಿದ್ದರೆ ಚಿಕಿತ್ಸೆ ನೀಡಬಹುದು. ಆದರೆ, ದೃಷ್ಟಿ ಕಳೆದುಕೊಂಡರೆ ಜಗತ್ತೇ ಕತ್ತಲೆಯಾದಂತೆ. ಹಾಗಾಗಿ ಇಂತಹ ಫ್ಯಾಷನ್ ಗೀಳಿನಿಂದ ದೂರವಿದ್ದಷ್ಟು ಸೇಫ್ ಎಂಬುದನ್ನು ನೆನಪಿಡಿ ಅಂತಾರೆ ತಜ್ಞ ವೈದ್ಯರು.
