ಉದಯವಾಹಿನಿ, ಕೋಟಾ(ರಾಜಸ್ಥಾನ​): ದೇಶದ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಜೆಇಇ ಮೇನ್ಸ್‌ನಲ್ಲಿ ಒಡಿಶಾದ ಭುವನೇಶ್ವರದ ಅವಳಿ ಸಹೋದರರು ಹೆಚ್ಚಿನ ಅಂಕ ಗಳಿಸಿದ್ದು ಮಾತ್ರವಲ್ಲದೇ, ಸಮಾನ ಅಂಕ ಪಡೆದು ಗಮನ ಸೆಳೆದಿದ್ದಾರೆ.
ಮಸ್ರೂರ್ ಮತ್ತು ಮಹರೂಫ್ 285 ಅಂಕಗಳು ಅಥವಾ 99 ಪರ್ಸಂಟೈಲ್ ಅಂಕ ಗಳಿಸಿರುವುದು ವಿಶೇಷ. ಇಬ್ಬರೂ ಒಂದೇ ಅವಧಿಯ ಪರೀಕ್ಷೆಗೆ ಹಾಜರಾಗಿದ್ದರು.ಜೆಇಇ ಮುಂದಿನ ಹಂತ ಅಡ್ವಾನ್ಸ್ಡ್‌​ನಲ್ಲೂ ಉತ್ತಮ ಅಂಕಗಳಿಸಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ (ಐಐಟಿ ಬಾಂಬೆ)ಯಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವ ಕನಸನ್ನು ಇಬ್ಬರೂ ಹೊಂದಿದ್ದಾರೆ.

ಭುವನೇಶ್ವರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ ಭುವನೇಶ್ವರ) ವೈದ್ಯಕೀಯ ಘಟಕದ ಉಸ್ತುವಾರಿಯಾಗಿರುವ ತಂದೆ ಡಾ.ಮನ್ಸೂರ್​ ಅಹಮದ್ ಮತ್ತು ತಾಯಿ, ಸ್ತ್ರೀರೋಗತಜ್ಞೆ ಡಾ.ಜೀನತ್ ಬೇಗಂ ಅವರು ಮಕ್ಕಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ತಾಯಿ ಜೀನತ್ ಅವರು ಕೋಟಾದಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಯನ್ನು ಬೆಂಬಲಿಸಲು ಒಡಿಶಾ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಆಸ್ಪತ್ರೆಯಲ್ಲಿ ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ​ಪೋಷಕರಿಬ್ಬರು ವೈದ್ಯರಾದರೂ ಅವಳಿ ಸಹೋದರರು ತಮ್ಮ ಕೋರ್​ ಸಬ್ಜೆಟ್​ ಆಗಿ ಗಣಿತವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

“ಗಣಿತ ಪರಿಕಲ್ಪನಾತ್ಮಕವಾಗಿದೆ. ಇದು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ತೀಕ್ಷ್ಣಗೊಳಿಸುತ್ತದೆ. ಬುದ್ದಿಶಕ್ತಿಯನ್ನು ತೆರೆಯುತ್ತದೆ. ನಮ್ಮ ಮಕ್ಕಳು ಹೀಗೇ ಆಗಬೇಕು ಎಂಬ ಒತ್ತಾಯವನ್ನು ನಾವು ಎಂದಿಗೂ ಹೇರಲಿಲ್ಲ. ಇಬ್ಬರ ಅಂತಿಮ ಆಯ್ಕೆ ಇಂಜಿನಿಯರಿಂಗ್​ ಆಗಿದೆ” ಎಂದು ಪೋಷಕರು ಹೇಳಿದ್ದಾರೆ.

ಡಾ.ಜೀನತ್ ಬೇಗಂ ಮೂರು ವರ್ಷಗಳಿಂದ ಕೋಟಾದಲ್ಲಿ ವಾಸಿಸುತ್ತಿದ್ದು, ಪತಿ ಎರಡು ತಿಂಗಳಿಗೊಮ್ಮೆ ಕುಟುಂಬದೊಂದಿಗೆ ಸಮಯ ಕಳೆಯಲು ರಾಜಸ್ಥಾನಕ್ಕೆ ಪ್ರಯಾಣಿಸುತ್ತಾರೆ. ಮಕ್ಕಳು 9ನೇ ತರಗತಿಯಲ್ಲಿರುವಾಗಲೇ ಕೋಟಾಗೆ ಸ್ಥಳಾಂತರಗೊಂಡಿದ್ದರು.”ನಮ್ಮ ಮಕ್ಕಳು 10ನೇ ತರಗತಿಯಿಂದ ಸಿದ್ದತೆ ಶುರು ಮಾಡಿದ್ದಾರೆ. ಕೋಟಾದಲ್ಲಿ ಕೋಚಿಂಗ್​ ಉತ್ತಮವಾಗಿದೆ. ಶಿಕ್ಷಕರು ಕೂಡ ಅದ್ಭುತವಾಗಿದ್ದಾರೆ. ವಿದ್ಯಾರ್ಥಿಗಳ ಯಾವುದೇ ಅನುಮಾನ ಹೋಗಲಾಡಿಲು ಸದಾ ಸಿದ್ಧರಿರುತ್ತಾರೆ. ಮಕ್ಕಳು ತಾವು ಪ್ರತ್ಯೇಕವಾಗಿದ್ದೇವೆ ಎಂಬ ಭಾವ ಬಾರದಂತೆ ಬೆಂಬಲಾಗಿ ನಿಲ್ಲುತ್ತಾರೆ” ಎಂದು ತಂದೆ ಮನ್ಸೂರ್ ಅಹಮದ್ ತಿಳಿಸಿದರು.

“ಕೋಟಾದಲ್ಲಿ ಅಧ್ಯಯನಕ್ಕೆ ಶಿಸ್ತಿನ ವಾತಾವರಣವಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಮಾಡಿದರೆ, ಆ ತಪ್ಪು ಮರುಕಳಿಸದಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಾರೆ. ಇಲ್ಲಿ ಇಬ್ಬರು ಒಟ್ಟಿಗೆ ಅಧ್ಯಯನ ಮಾಡುವ ಅವಕಾಶ ಪಡೆದರು” ಎಂದು ಹೇಳಿದರು.ಈಗಾಗಲೇ ಅವಳಿ ಸಹೋದರರು 2023ರ ಅಂತಾರಾಷ್ಟ್ರೀಯ ಜ್ಯೂನಿಯರ್​ ಸೈನ್ಸ್​ ಒಲಂಪಿಯಾಡ್​ನ ಒಸಿಎಸ್‌ಸಿಗೆ ಆಯ್ಕೆಯಾಗಿದ್ದಾರೆ. ಮಹರೂಫ್​ ಭಾರತ ತಂಡವನ್ನು ಥೈಲ್ಯಾಂಡ್​ನಲ್ಲಿ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. 2025ರ ಅಂತಾರಾಷ್ಟ್ರೀಯ ರಾಸಾಯನಶಾಸ್ತ್ರ ಒಲಂಪಿಯಡ್​​ನಲ್ಲೂ ಭಾಗಿಯಾಗಿದ್ದಾರೆ. 10ನೇ ತರಗತಿಯಲ್ಲೂ ಉತ್ತಮ ಸಾಧನೆ ತೋರಿದ್ದು, ಮಸ್ರೂರ್ ಶೇ.97 ಮತ್ತು ಮಹರೂಫ್ ಶೇ.96ರಷ್ಟು ಅಂಕ ಗಳಿಸಿದ್ದಾರೆ. ಅವಳಿ ಸಹೋದರರ ನಡುವಿನ ಆರೋಗ್ಯಕರ ಸ್ಪರ್ಧೆ ಅವರ ಶೈಕ್ಷಣಿಕ ಪ್ರದರ್ಶನ ಮತ್ತಷ್ಟು ಉತ್ತಮವಾಗಲು ನೆರವಾಗಿದೆ ಎನ್ನುತ್ತಾರೆ ಪೋಷಕರು.

Leave a Reply

Your email address will not be published. Required fields are marked *

error: Content is protected !!