ಉದಯವಾಹಿನಿ, ತಿರುವನಂತಪುರ (ಕೇರಳ): ‘ದಿ ಕೇರಳ ಸ್ಟೋರಿ 2: ಗೋಸ್​ ಬಿಯಂಡ್’​ ಚಿತ್ರದ ಟ್ರೈಲರ್​ ಸಾಕಷ್ಟು ವಿವಾದ ಮೂಡಿಸುತ್ತಿದ್ದು, ಈ ಸಿನಿಮಾವು ಕೋಮು ಸಾಮರಸ್ಯವನ್ನು ಕದಡುವ ಗುರಿಯ ಪ್ರಚಾರದ ಉದ್ದೇಶ ಹೊಂದಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್​ ಕಿಡಿಕಾರಿದ್ದಾರೆ.
2023ರಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾದ ಸಿಕ್ವೇಲ್​​ ಇದಾಗಿದ್ದು, ಈ ಚಿತ್ರದ ಟ್ರೈಲರ್​ ಇತ್ತೀಚಿಗೆ ಬಿಡುಗಡೆಯಾಗಿತ್ತು. ಈ ಸಿನಿಮಾ ರಾಜ್ಯದಲ್ಲಿ ಬಲವಂತದ ಮತಾಂತರದ ವಿಚಾರವನ್ನು ಪ್ರಚಾರ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಸಿಎಂ ವಿಜಯನ್​, ಮೊದಲ ಚಿತ್ರ ‘ದಿ ಕೇರಳ ಸ್ಟೋರಿ’ ರಾಜ್ಯದಲ್ಲಿ ದ್ವೇಷ ಹರಡುವ ಗುರಿ ಹಾಗೂ ಜಾತ್ಯತೀತ ಸಂಪ್ರದಾಯವನ್ನು ಅಪಮಾನ ಮಾಡುವ ಗುರಿಯನ್ನು ಹೊಂದಿತ್ತು.ಚಿತ್ರದ ಮೊದಲ ಭಾಗವು ಸುಳ್ಳುಗಳು, ದ್ವೇಷ ಮತ್ತು ಕೇರಳ ವಿರೋಧಿ ಪ್ರಚಾರದಿಂದ ತುಂಬಿದ್ದು, ಕೋಮು ಉದ್ದೇಶಗಳೊಂದಿಗೆ ಅದನ್ನು ನಿರ್ಮಿಸಲಾಗಿತ್ತು ಎಂಬುದನ್ನು ದೇಶ ಅರಿತುಕೊಂಡಿದೆ. ಕಲೆ ಹೆಸರಿನಲ್ಲಿ ಬಿಡುಗಡೆಯಾಗಲು ಮುಂದಾಗಿರುವ ವಿಕೃತ ಕೃತಿಯ ‘ದಿ ರಿಯಲ್ ಕೇರಳ ಸ್ಟೋರಿ’ ತಿರಸ್ಕರಿಸಲಾಗುವುದು ಎಂದಿದ್ದಾರೆ.
ಚಿತ್ರದ ಸಿಕ್ವೇಲ್​ ನಿರ್ಮಾಣ ಮಾಡಿರುವವರ ಮೇಲೆ ಹರಿಹಾಯ್ದಿರುವ ಸಿಎಂ, ಕೇರಳದ ಸಹೋದರತ್ವ ಮತ್ತು ಜಾತ್ಯತೀತ ಮಾದರಿಯಿಂದ ಹೆದರಿರುವವರು ನಿರಂತರವಾಗಿ ದ್ವೇಷ ಪ್ರಚಾರ ನಡೆಸುತ್ತಿದ್ದಾರೆ. ಅವರು ಕೇರಳ ಸ್ಟೋರಿ ಮೂಲಕ ಸುಳ್ಳು ಹರಡುವ ಕೆಲಸ ನಡೆಸಿದ್ದಾರೆ.
ಪರಸ್ಪರ ಸಹಕಾರದ ಒಪ್ಪಿಗೆಯಿಂದ ನಡೆಯುವ ಮದುವೆಗಳಿಗೂ ಕೋಮುವಾದದ ಬಣ್ಣ ನೀಡಿ, ಬಲವಂತದ ಧಾರ್ಮಿಕ ಮತಾಂತರ ಮಾಡುವ ಮೂಲಕ ಸುಳ್ಳು ಪ್ರಚಾರವನ್ನು ಹರಡುತ್ತಿದ್ದಾರೆ. ಯಾವುದೇ ಕೋಮು ಗಲಭೆಗಳಿಲ್ಲದ ಮತ್ತು ಎಲ್ಲಾ ಧರ್ಮೀಯರು ಪರಸ್ಪರ ಗೌರವದಿಂದ ಸಹಬಾಳ್ವೆ ನಡೆಸುವ ಕೇರಳವನ್ನು ಅವರು ದ್ವೇಷದಿಂದ ನೋಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.ಈ ರೀತಿಯ ಕೆಲಸ ಮಾಡುವವರು ದೇಶದ ಶತ್ರುಗಳಾಗಿದ್ದು, ದೇಶದ ಶಾಂತಿ ಮತ್ತು ನೆಮ್ಮದಿಯನ್ನು ವಿಷಪೂರಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಜಯ್​ ಟೀಕಿಸಿದ್ದಾರೆ.

ಚಿತ್ರದ ಸ್ಕ್ರೀನಿಂಗ್​ ಕುರಿತು ಪ್ರಶ್ನಿಸಿರುವ ಸಿಎಂ, ವಿಭಜನೆ ಹರಡುವ ಮತ್ತು ಸಮಾಜದಲ್ಲಿ ದ್ವೇಷ ಹರಡುವ ಗುರಿಯನ್ನು ಹೊಂದಿರುವ ವಿಷಪೂರಿತ ಕೆಲಸದ ನಿರ್ಮಾಣ ಮಾಡುವ ಚಿತ್ರಕ್ಕೆ ಹೇಗೆ ಪ್ರಸಾರಕ್ಕೆ ಅನುಮತಿ ನೀಡಲಾಗಿದೆ ಎಂದು ಕೂಡ ಪ್ರಶ್ನಿಸಿದ್ದಾರೆ. ಬೀಫ್​ ಎಂಬ ಹೆಸರು ಹೊಂದಿರುವ ಕಾರಣಕ್ಕೆ ಚಿತ್ರಕ್ಕೆ ಪ್ರದರ್ಶನಕ್ಕೆ ಸಿನಿಮೋತ್ಸವದಲ್ಲಿ ಅನುಮತಿ ನಿರಾಕರಿಸಿದ ಸಂದರ್ಭದಲ್ಲಿ ಈ ಚಿತ್ರ ಹೇಗೆ ಪ್ರಸಾರಗೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಸಾಮರಸ್ಯದ ಭೂಮಿ, ಸುಸ್ಥಿರ ಅಭಿವೃದ್ದಿಯಲ್ಲಿ ಮುಂಚೂಣಿ, ಕಾನೂನು ಮತ್ತು ಸುವ್ಯವಸ್ಥೆಯ ಮಾದರಿಯಾಗಿರುವ ಕೇರಳವನ್ನು ವ್ಯತಿರಿಕ್ತವಾಗಿ ತೋರಿಸಲು ಹೊರಟಿರುವ ಚಿತ್ರವನ್ನು ಕೇರಳಿಗರು ಸಾಮೂಹಿಕವಾಗಿ ನಿರಾಕರಿಸಬೇಕು. ತಪ್ಪು ಪ್ರಚಾರಗಳಿಂದಾಗಿ ಕೇರಳದ ಜಾತ್ಯತೀತ ಅಡಿಪಾಯವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ. ನಾವು ಭ್ರಾತೃತ್ವ ಮತ್ತು ಜಾತ್ಯತೀತ ಮೌಲ್ಯ ಮತ್ತು ನೈಜತೆಯನ್ನು ಎತ್ತಿ ಹಿಡಿಯಬೇಕಿದೆ. ಕೇರಳ ನಮ್ಮ ಹೆಮ್ಮೆಯಾಗಿದೆ. ನಾವು ಒಟ್ಟಾಗಿ ನಿಲ್ಲಬೇಕಿದೆ ಎಂದು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!