ಉದಯವಾಹಿನಿ, ಕೇವಲ ಒಂದು ಹಣ್ಣು ಅಥವಾ ತರಕಾರಿ ಹೃದಯದ ಆರೋಗ್ಯಕ್ಕಾಗಿ ಯಾವುದಾದರೂ ಒಂದು ಮ್ಯಾಜಿಕ್ ಹಣ್ಣು ಅಥವಾ ತರಕಾರಿ ಇದೆಯೇ? ಇಂತಹ ಪ್ರಶ್ನೆಗಳಿಗೆ ಏಮ್ಸ್ ನಲ್ಲಿ ತರಬೇತಿ ಪಡೆದ ವೈದ್ಯರಾದ ಡಾ. ಪ್ರಿಯಾಂಕಾ ಸೆಹ್ರಾವತ್ ಅವರು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ಕೇವಲ ಒಂದು ಹಣ್ಣು ಅಥವಾ ತರಕಾರಿ ತಿನ್ನುವುದರಿಂದ ನಿಮ್ಮ ಹೃದಯ ಅಥವಾ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ನಂಬುವವರಿಗೆ ಈ ಮಾಹಿತಿ ಕಣ್ತೆರೆಸುವಂತಿದೆ.
ಡಾ. ಪ್ರಿಯಾಂಕಾ ಅವರು ತಮ್ಮ ಇತ್ತೀಚಿನ ವಿಡಿಯೋದಲ್ಲಿ, “ಹೃದಯಾಘಾತ ಅಥವಾ ಪಾರ್ಶ್ವವಾಯು ಅಂತಹ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡಲು ಯಾವುದೇ ಒಂದು ಜಾದುವಿನ ಹಣ್ಣು ಅಥವಾ ತರಕಾರಿ ಇಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಇವು ‘ಮಲ್ಟಿ ಫ್ಯಾಕ್ಟೋರಿಯಲ್’ ಕಾಯಿಲೆಗಳಾಗಿದ್ದು, ಇವುಗಳ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ ಎಂದು ಅವರು ವಿವರಿಸಿದ್ದಾರೆ.
ಹೃದಯದ ಆರೋಗ್ಯ ನಿರ್ಧರಿಸುವ ಅಂಶಗಳು
ಹೃದಯದ ಆರೋಗ್ಯವು ಕೇವಲ ಆಹಾರಕ್ಕೆ ಸೀಮಿತವಾಗಿಲ್ಲ, ಬದಲಿಗೆ ನಿಮ್ಮ ಜೀವನಶೈಲಿಯ ಈ ಕೆಳಗಿನ ಅಂಶಗಳನ್ನು ಅವಲಂಬಿಸಿದೆ.
ದೈನಂದಿನ ದಿನಚರಿ: ನಿಮ್ಮ ಇಡೀ ದಿನದ ರೂಟಿನ್ ಹೇಗಿದೆ?
ಒತ್ತಡ ನಿರ್ವಹಣೆ: ನೀವು ಎಷ್ಟು ಆತಂಕ ಅಥವಾ ಸ್ಟ್ರೆಸ್‌ನಲ್ಲಿ ಇರುತ್ತೀರಿ?
ಸಮತೋಲಿತ ಆಹಾರ: ನಿಮ್ಮ ಆಹಾರದಲ್ಲಿ ಪ್ರೋಟೀನ್ ಮತ್ತು ಅಗತ್ಯ ಪೋಷಕಾಂಶಗಳು ಇವೆಯೇ?
ದೈಹಿಕ ಚಟುವಟಿಕೆ: ನಿಮ್ಮ ವ್ಯಾಯಾಮ, ತರಬೇತಿ ಮತ್ತು ಏರೋಬಿಕ್ ಅಭ್ಯಾಸಗಳು ಎಷ್ಟರ ಮಟ್ಟಿಗಿವೆ?
ಕೇವಲ ಹಣ್ಣುಗಳ ಮೇಲೆ ಯಾಕೆ ಅವಲಂಬಿತರಾಗಬಾರದು?
ಈ ರೋಗಗಳು ಮಲ್ಟಿ ಫ್ಯಾಕ್ಟೋರಿಯಲ್ ಆಗಿರುವುದರಿಂದ, ಕೇವಲ ಉತ್ತಮ ಆಹಾರ ಸೇವಿಸಿದರೆ ಸಾಲದು. ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. “ದಿನಕ್ಕೆ ನಿಮಗಾಗಿ ನೀವು ಕನಿಷ್ಠ 5 ನಿಮಿಷ ಸಮಯ ಮೀಸಲಿಡುತ್ತೀರಾ? ನಿಮ್ಮ ನಿದ್ರೆ ಸರಿಯಾಗಿದೆಯೇ? ಇವೆಲ್ಲವೂ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ. ಹಾಗಾಗಿ ಯಾವುದೇ ಒಂದು ಮ್ಯಾಜಿಕ್ ಹಣ್ಣಿನ ಹುಡುಕಾಟ ಮಾಡುವುದನ್ನು ನಿಲ್ಲಿಸಿ,” ಎಂದು ಡಾ. ಪ್ರಿಯಾಂಕಾ ಕಿವಿಮಾತು ಹೇಳಿದ್ದಾರೆ.
