ಉದಯವಾಹಿನಿ, ತಮಿಳುನಾಡು: ಚಿಕ್ಕ ವಯಸ್ಸಿನಿಂದಲೂ ಸೈಕ್ಲಿಂಗ್ ಎಂದರೆ ತುಂಬಾ ಇಷ್ಟ. ಅಪ್ಪ- ಅಮ್ಮ ಕೂಲಿ ಕಾರ್ಮಿಕರಾಗಿದ್ದರಿಂದ ಹೊಸ ಸೈಕಲ್ ಖರೀದಿಸೋದು ಸಾಧ್ಯವಿರಲಿಲ್ಲ. ಸ್ನೇಹಿತರು, ಸಂಬಂಧಿಕರಿಂದ ಸೈಕಲ್ ಖರೀದಿಸಿ ಅಭ್ಯಾಸ ಮಾಡಿದೆ. ಈಗ ಟೀಚರ್ಸ್ ಹಾಗೂ ಸ್ನೇಹಿತರು ಕೊಡಿಸಿದ ಹೊಸ ಸೈಕಲ್ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ, ಪದಕ ಗೆದ್ದಿರುವ ಖುಷಿ ನನ್ನದು
ಡ್ರಮ್, ಬ್ಯಾಂಡ್ನೊಂದಿಗೆ ಮೆರವಣಿಗೆ: ಇದು 22ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಆಂಥೋನಿ ರಾಜ್ ಮಾತು. ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದು, ಊರಿಗೆ ಹೆಸರು ತಂದ ಆಂಥೋನಿ ರಾಜ್ ಅವರನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಸೇರಿ ಡ್ರಮ್, ಬ್ಯಾಂಡ್ನೊಂದಿಗೆ ಮೆರವಣಿಗೆ ಮಾಡಿ, ವಿದ್ಯಾರ್ಥಿಯ ಗೆಲುವನ್ನು ಸಂಭ್ರಮಿಸಿದರು.
12ರಿಂದ15ರವರೆಗೆ ನಾಲ್ಕು ದಿನಗಳ ಕಾಲ ಅರುಣಾಚಲ ಪ್ರದೇಶದಲ್ಲಿ 22ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಡೆಯಿತು. ಈ ಸ್ಪರ್ಧೆಯಲ್ಲಿ ಭಾರತದ 29 ರಾಜ್ಯಗಳಿಂದ 512 ಜನರು ಭಾಗವಹಿಸಿದ್ದರು. ತಮಿಳುನಾಡಿನಿಂದ 20ಕ್ಕೂ ಹೆಚ್ಚು ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ 9 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳು ತಮಿಳುನಾಡಿನ ಪಾಲಾಗಿದೆ. 16 ವರ್ಷದೊಳಗಿನವರ ವಿಭಾಗದಲ್ಲಿ ಪ್ರಾಣೇಶ್ ಎಂಬ ವಿದ್ಯಾರ್ಥಿ ಚಿನ್ನ ಗೆದ್ದರೆ, ಕೊಯಮತ್ತೂರಿನ ಕರುಮತಂಪಟ್ಟಿ ಪ್ರದೇಶದ ಆಂಥೋನಿ ರಾಜ್ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈತ ಕರುಮತಂಪಟ್ಟಿ ಬಳಿಯ ವಗರಾಯಂಪಾಳಯಂ ಸರ್ಕಾರಿ ಪ್ರೌಢಶಾಲೆಯಲ್ಲಿ 12 ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಬಾಲ್ಯದದಿಂದಲೂ ಸೈಕ್ಲಿಂಗ್ ಎಂದರೆ ಪಂಚಪ್ರಾಣ: ಬಾಲ್ಯದಿಂದಲೂ ಸೈಕ್ಲಿಂಗ್ ಬಗ್ಗೆ ಆಸಕ್ತಿ ಹೊಂದಿರುವ ಆಂಥೋನಿ ರಾಜ್, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿರುವುದು ಇಡೀ ಊರಿಗೇ ತುಂಬಾ ಸಂತೋಷ ತಂದಿದೆ. ಹಾಗಾಗಿ ಈ ಗೆಲುವನ್ನು ಸಂಭ್ರಮಿಸಲು, ಪದಕಗಳೊಂದಿಗೆ ಆಗಮಿಸಿದ ಆಂಥೋನಿ ರಾಜ್ ಅವರನ್ನು ಗ್ರಾಮದ ಗಡಿಯಲ್ಲೇ ಸ್ವಾಗತಿಸಿ, ಮೆರವಣಿಗೆ ಮಾಡಲಾಯಿತು. ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಊರಿನ ಜನರೆಲ್ಲ ಜಮಾಯಿಸಿ ಆಂಥೋನಿ ರಾಜ್ ಅವರನ್ನು ಡ್ರಮ್‌ಬ್ಯಾಟ್‌ಗಳೊಂದಿಗೆ, ಶಾಲು ಹೊದಿಸಿ, ಹೂಮಾಲೆ ಹಾಕಿ ಸ್ವಾಗತಿಸಿದರು. ನಂತರ ಆಂಥೋನಿ ರಾಜ್ ಅವರನ್ನು ವಗರಾಯಂಪಾಳಯಂ ಪಟ್ಟಣ ಪಂಚಾಯತ್ ಕಚೇರಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದ ಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹ ಶಾಲಾ ಆವರಣದಲ್ಲಿ ವಿದ್ಯಾರ್ಥಿಯನ್ನು ಅಭಿನಂದಿಸಿದರು.
ವಿದ್ಯಾರ್ಥಿಯ ಮನದ ಮಾತು: ನನಗೆ ಬಾಲ್ಯದಿಂದಲೂ ಸೈಕ್ಲಿಂಗ್‌ನಲ್ಲಿ ತುಂಬಾ ಆಸಕ್ತಿ. ನನ್ನ ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದರಿಂದ, ನನಗೆ ಹೊಸ ಸೈಕಲ್ ಖರೀದಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ನನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ಹಳೆಯ ಸೈಕಲ್‌ಗಳನ್ನು ಖರೀದಿಸಿ ಅಭ್ಯಾಸ ಮಾಡುತ್ತಿದ್ದೆ. ಹಳೇ ಸೈಕಲ್ನಲ್ಲಿ ಮಾಡಿದ ಅಭ್ಯಾಸದಿಂದಲೇ ನಾನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಗೆದ್ದಿದ್ದೇನೆ. ನಂತರ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ನನಗೆ ಹೊಸ ಸೈಕಲ್ ಅಗತ್ಯವಿತ್ತು, ಆದ್ದರಿಂದ ನನ್ನ ಶಿಕ್ಷಕರು ಮತ್ತು ಸ್ನೇಹಿತರು ನನಗೆ ಹೊಸ ಸೈಕಲ್ ಖರೀದಿಸಿ ಕೊಟ್ಟರು. ಈ ಸೈಕಲ್ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷ ಇದೆ” ಎಂದು ವಿದ್ಯಾರ್ಥಿ ಆಂಥೋನಿ ರಾಜ್ ಖುಷಿ ಹಂಚಿಕೊಂಡರು.
“ಸ್ಪರ್ಧೆಯ ಒಂದು ದಿನ ಮೊದಲು ತರಬೇತಿಯ ಸಮಯದಲ್ಲಿ ಬಿದ್ದು ಗಾಯಗೊಂಡಿದ್ದರೂ, ನನ್ನ ಕುಟುಂಬದ ಪರಿಸ್ಥಿತಿ ಮತ್ತು ನನಗೆ ಸಹಾಯ ಮಾಡಿದ ಸ್ನೇಹಿತರನ್ನು ಯೋಚಿಸಿ ಶ್ರದ್ಧೆಯಿಂದ ಸೈಕ್ಲಿಂಗ್ ಮಾಡುವ ಮೂಲಕ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದೆ, ನಾನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದೇನೆ” ಎಂದು ಹೇಳಿದರು.
