ಉದಯವಾಹಿನಿ, ಒಡಿಶಾ: ಕೇವಲ ಎರಡು ಎಕರೆಯಲ್ಲಿ 2,000 ಪೇರಲ ಮರಗಳನ್ನು ನೆಟ್ಟಿರುವ ಸಂಬಲ್ಪುರ ಜಿಲ್ಲೆಯ 56 ವರ್ಷದ ವೀರ್ ಕಿಶೋರ್ ಬಿಸ್ವಾಲ್ ಎಂಬ ರೈತ ವರ್ಷಕ್ಕೆ 50 ಲಕ್ಷ ರೂ. ಆದಾಯ ಗಳಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.ಅದು ಸಾವಯವ ಕೃಷಿ ಪದ್ಧತಿ ಮೂಲಕ ಅನ್ನೋದು ಗಮನಾರ್ಹ. ವೀರ್ ಕಿಶೋರ್ ಕೇವಲ ಲಾಭ ಗಳಿಕೆ ಮಾತ್ರವಲ್ಲದೇ ಏಳು ಕುಟುಂಬಗಳಿಗೆ ಜೀವನಾಧಾರ ಕೂಡ ಆಗಿದ್ದಾರೆ. ಯಾವುದೇ ವಿಶೇಷ ತರಬೇತಿಯನ್ನು ಪಡೆಯದ ವೀರ್ ಕಿಶೋರ್, ತಮ್ಮ ತೋಟದಲ್ಲಿ ರುಚಿಕರವಾದ ಹಾಗೂ ಬೇರೆ ಬೇರೆ ಪ್ರಬೇಧಗಳ ಹಣ್ಣುಗಳನ್ನು ಬೆಳೆದಿದ್ದಾರೆ. ಇದರಲ್ಲಿ ದುಬಾರಿ ಬೆಲೆಯ ಥಾಯ್ಲೆಂಡ್​ನ ಪಿಂಕ್​ ಮತ್ತು ಜಪಾನ್‌ನ ಬ್ಲ್ಯಾಕ್ ಡೈಮಂಡ್ ವಿದೇಶಿ ತಳಿಗಳ ಜೊತೆಗೆ ದೇಶೀಯ ತಳಿಗಳು ಸೇರಿವೆ.

ಪೇರಲ ಕೃಷಿ ಕುರಿತು ಮಾಹಿತಿ ನೀಡಿರುವ ವೀರ್ ಕಿಶೋರ್, ”ಈ ರೀತಿ ಉತ್ಪಾದಿಸಿದ ಪೇರಲಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಕೆ.ಜಿಗೆ 120 ರಿಂದ 250 ರೂ.ಗಳವರೆಗೆ ಇರುತ್ತದೆ. ಸದ್ಯ ತಮ್ಮ 2 ಎಕರೆ ಭೂಮಿಯನ್ನು ಪೇರಲಕ್ಕೆ ಬಳಸಿಕೊಂಡಿದ್ದೇವೆ. ಸುಮಾರು 2,000 ಮರಗಳನ್ನು ನೆಡಲಾಗಿದೆ. ಆದಾಯ ನೋಡಿಕೊಂಡು ಭವಿಷ್ಯದಲ್ಲಿ ಅದನ್ನು ಮತ್ತಷ್ಟು ವಿಸ್ತರಿಸಲು ಯೋಜಿಸಿದ್ದೇವೆ” ಎಂದು ಹೇಳಿದ್ದಾರೆ. ಜಪಾನೀಸ್​ ಬ್ಲಾಕ್​​​ ಡೈಮಂಡ್​​​​ಗೆ ಕೆ.ಜಿಗೆ 4500 ರೂ.: ”ಕೋಲ್ಕತ್ತಾದ ನರ್ಸರಿಯಿಂದ ಈ ತಳಿಗಳ ಸಸಿಗಳನ್ನು ತಂದು ಇಲ್ಲಿ ಬೆಳೆಸಿದ್ದೇವೆ. ಈಗ, ಈ ಮರಗಳನ್ನು ವರ್ಷಕ್ಕೆ 3 ಬಾರಿ ಕೊಯ್ಲು ಮಾಡಲಾಗುತ್ತಿದೆ. ಥಾಯ್ ತಳಿಯ ಪೇರಲದ ಬೆಲೆ ಒಂದು ಕಿಲೋಗ್ರಾಂ 250 ರೂ.ಗಳಾಗಿದ್ದರೆ, ಜಪಾನೀಸ್ ಬ್ಲಾಕ್ ಡೈಮಂಡ್ ತಳಿಯ ಪೇರಲಕ್ಕೆ ಒಂದು ಕಿಲೋಗ್ರಾಂ 4,500 ರೂ. ಇದೆ. ತಮ್ಮ ತೋಟದಲ್ಲಿ ಎಲ್ಲ ವಿಧದ ವಿದೇಶಿ ಪೇರಲವನ್ನು ಬೆಳೆಯಲಾಗುತ್ತಿದೆ” ಎಂದು ವೀರ್ ಕಿಶೋರ್ ಮಾಹಿತಿ ನೀಡಿದ್ದಾರೆ.

ವಿಶೇಷ ತರಬೇತಿ ಇಲ್ಲದೇ ಅದ್ಬುತ ಕೃಷಿ: ತಮ್ಮ ತೋಟದಲ್ಲಿ ನೆಟ್ಟ ಎಲ್ಲ ಸಸ್ಯಗಳನ್ನು ಸ್ವತಃ ತಾವೇ ಕಸಿ ಮಾಡಿದ್ದೇವೆ. ಇದಕ್ಕಾಗಿ ನಾನು ಯಾರಿಂದಲೂ ಯಾವುದೇ ವಿಶೇಷ ತರಬೇತಿ ಪಡೆದಿಲ್ಲ. ಯೂಟ್ಯೂಬ್‌ನಲ್ಲಿ ಬರುವ ಯಶಸ್ವಿ ರೈತರ ವಿಡಿಯೊಗಳನ್ನು ನೋಡುತ್ತಿದ್ದೆ. ಅಲ್ಲಿ ಹೇಳುತ್ತಿದ್ದ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಇಂದು ತಮ್ಮ ತೋಟದಲ್ಲಿ ರುಚಿಕರವಾದ ಹಣ್ಣುಗಳನ್ನು ಬೆಳೆದಿರುವೆ ಎಂದು ವೀರ್ ಕಿಶೋರ್ ಹೇಳಿಕೊಂಡಿದ್ದಾರೆ. ಕಸಿ ಮಾಡುವುದು, ತೆಳುಗೊಳಿಸುವುದು ಮತ್ತು ಬ್ಯಾಗಿಂಗ್ ಈ ಮೂರು ವಿಧಾನವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವೆ. ಇದರಿಂದಲೇ ಪೇರಲವು 700 ಗ್ರಾಂ ನಿಂದ ಒಂದೂವರೆ ಕಿಲೋಗ್ರಾಂಗಳಷ್ಟು ತೂಗುತ್ತದೆ. ಹಣ್ಣುಗಳನ್ನು ಕೀಟಗಳಿಂದ ರಕ್ಷಣೆ ಮಾಡುವುದು ಒಂದು ಸವಾಲು. ಅದಕ್ಕೂ ಸಾಕಷ್ಟು ಶ್ರಮ ಹಾಕುತ್ತಿರುವೆ. ಹುಳು ಆಗದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಲಾಗುತ್ತಿದೆ. ಇಂತಹ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಪೇರಳೆ ಹಣ್ಣು 40 ದಿನಗಳಲ್ಲಿ 1 ಕೆಜಿಗಿಂತ ಹೆಚ್ಚು ತೂಗುತ್ತದೆ. ತಮ್ಮ 2 ಎಕರೆಯಲ್ಲಿ ಪೇರಳೆ ಬೆಳೆಯಲು ತಾನು 14 ಲಕ್ಷ ರೂ. ಹೂಡಿಕೆ ಮಾಡಿರುವೆ” ಎನ್ನುತ್ತಾರೆ ವೀರ್ ಕಿಶೋರ್.

 

Leave a Reply

Your email address will not be published. Required fields are marked *

error: Content is protected !!