ಉದಯವಾಹಿನಿ, ಪೇಶಾವರ: ಭಾರತದ ಅಂಜು ನಂತರ ಇದೀಗ ಪ್ರಿಯಕರನಿಗಾಗಿ ಪಾಕ್‌ಗೆ ಚೀನಾದ ಮಹಿಳೆಯೊಬ್ಬರು ತೆರಳಿದ್ದು ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಚೀನಾದ ಮಹಿಳೆಯೊಬ್ಬರು ಪಾಕಿಸ್ತಾನಿ ಗೆಳೆಯನನ್ನು ಭೇಟಿಯಾಗಲು ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ತೆರಳಿದ್ದಳು.
ಮಾಹಿತಿಯ ಪ್ರಕಾರ, ಈ ಮಹಿಳೆಯ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆದಿದ್ದು ನಂತರ ಇಬ್ಬರ ನಡುವೆ ಪರಸ್ಪರ ಪ್ರೇಮ ಬೆಳೆದಿತ್ತು. ಸ್ಥಳೀಯ ಮಾಧ್ಯಮಗಳು ಗಾವೊ ಫೆಂಗ್ ಎಂದು ಗುರುತಿಸಿರುವ ಮಹಿಳೆ ಮೂರು ತಿಂಗಳ ಪ್ರಯಾಣ ವೀಸಾದಲ್ಲಿ ಚೀನಾದಿಂದ ಗಿಲ್ಗಿಟ್ ಮೂಲಕ ರಸ್ತೆ ಮಾರ್ಗವಾಗಿ ನಿನ್ನೆ ಇಸ್ಲಾಮಾಬಾದ್‌ಗೆ ಆಗಮಿಸಿದ್ದಾಳೆ. ಪೊಲೀಸರ ಪ್ರಕಾರ, 21 ವರ್ಷದ ಯುವತಿ ಆಕೆಯ 18 ವರ್ಷದ ಗೆಳೆಯ ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಜಿಲ್ಲೆಯ ಬಜೌರ್ ನಿವಾಸಿ ಜಾವೇದ್ ನನ್ನು ಭೇಟಿಯಾಗಿದ್ದಳು.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಜೌರ್ ಜಿಲ್ಲೆಯ ಭದ್ರತಾ ಪರಿಸ್ಥಿತಿಯಿಂದಾಗಿ, ಜಾವೇದ್ ಯುವತಿಯನ್ನು ತನ್ನ ಊರಿನ ಬದಲು ಲೋವರ್ ದಿರ್ ಜಿಲ್ಲೆಯ ಸಮರ್‌ಬಾಗ್ ತೆಹ್ಸಿಲ್‌ನಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದಾನೆ. ಕಳೆದ ಮೂರು ವರ್ಷಗಳಿಂದ ಸ್ನ್ಯಾಪ್‌ಚಾಟ್ ಮೂಲಕ ಇಬ್ಬರು ಸಂಪರ್ಕದಲ್ಲಿದ್ದು, ಸ್ನೇಹ ಪ್ರೇಮಕ್ಕೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
