ಉದಯವಾಹಿನಿ, ಬೆಂಗಳೂರು: ತಡವಾಗಿ ಆಗಮಿಸಿದರು ಎಂಬ ಕಾರಣ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ಹಾರಿದ್ದ ಏರ್ ಏಷ್ಯಾ ವಿಮಾನಯಾನ ಸಂಸ್ಥೆ ಶುಕ್ರವಾರ ಈ ಸಂಬಂಧ ಕ್ಷಮೆ ಯಾಚಿಸಿದೆ.
ರಾಜ್ಯಪಾಲರನ್ನು ಬಿಟ್ಟು ಹಾರಿದ್ದ ವಿಮಾನಯಾನ ಸಂಸ್ಥೆ ವಿರುದ್ಧ ರಾಜ್ಯಪಾಲರ ಕಚೇರಿ “ಶಿಷ್ಟಾಚಾರ ಉಲ್ಲಂಘನೆ” ಪ್ರಕರಣ ದಾಖಲಿಸಿದ ಬೆನ್ನಲ್ಲೇ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ.
ರಾಜ್ಯಪಾಲರ ಪ್ರೋಟೋಕಾಲ್ ಅಧಿಕಾರಿ ಎಂ.ವೇಣುಗೋಪಾಲ್ ಅವರು ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಐಎಕ್ಸ್ ಕನೆಕ್ಟ್ ಹಾಗೂ ಇದಕ್ಕೆ ಕಾರಣರಾದ ಏರ್‌ಲೈನ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಇನ್ನು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ ವಿಮಾನಯಾನ ಸಂಸ್ಥೆ, ರಾಜ್ಯಪಾಲರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.
ಘಟನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
ಏರ್‌ಲೈನ್‌ನ ಹಿರಿಯ ಅಧಿಕಾರಿಗಳ ತಂಡ, ಕಳವಳಗಳನ್ನು ಪರಿಹರಿಸಲು ಗವರ್ನರ್ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಎಐಎಕ್ಸ್ ಕನೆಕ್ಟ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
